ಸೋಮವಾರಪೇಟೆ, NEWS DESK ಅ.12: ಪಟ್ಟಣದ ಸೋಮೇಶ್ವರ ದೇವಾಲಯದ ಶಕ್ತಿ ಪಾರ್ವತಿ ಸನ್ನಿಧಿಯಲ್ಲಿ 21ನೇ ವರ್ಷದ ಶರನ್ನವರಾತ್ರಿ ಉತ್ಸವಕ್ಕೆ ಶ್ರದ್ಧಾಭಕ್ತಿಯಿಂದ ವಿದ್ಯುಕ್ತ ಚಾಲನೆ ನೀಡಲಾಯಿತು.
ಪ್ರತಿವರ್ಷದಂತೆ ಈ ವರ್ಷವೂ ಧಾರ್ಮಿಕ ವಿಧಿವಿಧಾನಗಳೊಂದಿಗೆ ಉತ್ಸವವನ್ನು ಆರಂಭಿಸಲಾಯಿತು. ಪಟ್ಟಣದ ಆನೆಕೆರೆಯಲ್ಲಿ ಗಂಗಾಪೂಜೆ ನೆರವೇರಿಸಿದ ಬಳಿಕ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ದೇವಾಲಯಕ್ಕೆ ತರಲಾಯಿತು. ಬಳಿಕ ದೇವಾಲಯದ ಅರ್ಚಕರಾದ ಚಿತ್ರಕುಮಾರ ಭಟ್ ಅವರ ಪುರೋಹಿತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ಸಂಜೆ ಶಕ್ತಿ ಪಾರ್ವತಿ ದೇವಿಗೆ ವಿಶೇಷ ಪುಷ್ಪಾಲಂಕಾರ ನೆರವೇರಿಸಲಾಯಿತು. ಬಳಿಕ ಲಲಿತಾಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ, ರಂಗಪೂಜೆ, ಆವರಿನೋತ್ಸವ ಹಾಗೂ ಉಯ್ಯಾಲೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ನಂತರ ಮಹಾಮಂಗಳಾರತಿ ನೆರವೇರಿಸಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಉತ್ಸವದ ಅಂಗವಾಗಿ ದೇವಾಲಯದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು.

















