ಸೋಮವಾರಪೇಟೆ, NEWS DESK ಅ.12 : ಹಿರಿಯ ಹಾಕಿ ಆಟಗಾರ್ತಿ ಹಾಗೂ ತರಬೇತುದಾರರಾದ ದೇವರಾಜಮ್ಮ ಅವರು ಕ್ರೀಡಾ ಕ್ಷೇತ್ರದ ಸಾಧನೆಗಾಗಿ ಪ್ರತಿಷ್ಠಿತ ನಾಡೋಜ ಕಮಲ ಹಂಪನಾ ರಾಜ್ಯಪ್ರಶಸ್ತಿಗೆ ಭಾಜನರಾಗಿದ್ದಾರೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ರಾಜ್ಯ ಜನಪದ ಪರಿಷತ್ ಮಹಿಳಾ ಸಮ್ಮೇಳನದಲ್ಲಿ ರಾಜ್ಯ ವಿಧಾನ ಪರಿಷತ್ ಉಪಸಭಾಪತಿ ಹಾಗೂ ಚಲನಚಿತ್ರ ನಟಿ ಉಮಾಶ್ರೀ ಅವರು ದೇವರಾಜಮ್ಮ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಸೋಮವಾರಪೇಟೆ ತಾಲೂಕಿನ ಆಲೂರು ಸಿದ್ದಾಪುರ ಸಮೀಪದ ಮೆಣಸ ಗ್ರಾಮದವರಾದ ದೇವರಾಜಮ್ಮ ಅವರು ಹಾಕಿ ಕ್ರೀಡೆಯಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅವರು, ರಾಜ್ಯ ಯುವಜನ ಸೇವಾ ಇಲಾಖೆಯಲ್ಲಿ ಮಹಿಳಾ ಹಾಕಿ ತರಬೇತುದಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಕ್ರೀಡಾ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆ ಹಾಗೂ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

















