ಮಡಿಕೇರಿ, NEWS DESK ಅ.12: ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಹೆಮ್ಮೆಯ ದುಬೈ ಕನ್ನಡ ಸಂಘದ ವತಿಯಿಂದ ಕೊಡಗಿನ ಕುಂಜಿಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆಟೋಪಕರಣಗಳು ಹಾಗೂ ಪೀಠೋಪಕರಣಗಳನ್ನು ಕೊಡುಗೆಯಾಗಿ ನೀಡಲಾಯಿತು.
ಹೆಮ್ಮೆಯ ದುಬೈ ಕನ್ನಡ ಸಂಘವು ತನ್ನ ‘ಸರ್ಕಾರಿ ಶಾಲೆ ಉಳಿಸಿ’ ಅಭಿಯಾನದಡಿ ಕರ್ನಾಟಕದ ವಿವಿಧ ಭಾಗಗಳಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳ ದುರಸ್ತಿ, ಬಣ್ಣ ಬಳಿಯುವಿಕೆ ಹಾಗೂ ಅಗತ್ಯ ಉಪಕರಣಗಳ ಪೂರೈಕೆಯ ಮೂಲಕ ಶೈಕ್ಷಣಿಕ ಮೂಲಸೌಕರ್ಯ ಅಭಿವೃದ್ಧಿಗೆ ಶ್ರಮಿಸುತ್ತಿದೆ.
ಈ ಅಭಿಯಾನದ ಅಂಗವಾಗಿ ಕುಂಜಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೆಮ್ಮೆಯ ದುಬೈ ಕನ್ನಡ ಸಂಘದ ರಫೀಕಲಿ ಕುಂಡಂಡ ಹಾಗೂ ಆಹ್ವಾನಿತ ಗಣ್ಯರು ಶಾಲೆಯ ಮುಖ್ಯ ಶಿಕ್ಷಕಿ ಸವಿತಾ ಮತ್ತು ವಿದ್ಯಾರ್ಥಿಗಳಿಗೆ ಆಟೋಪಕರಣಗಳು ಹಾಗೂ ಪೀಠೋಪಕರಣಗಳನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಸಫಿಯಾ ಹಮೀದ್, ನಿವೃತ್ತ ಸೈನಿಕ ಮೊಇದೀನ್, ಕುಂಜಿಲ ಜಮಾತ್ ಉಪಾಧ್ಯಕ್ಷ ಮುಸ್ತಫಾ ಬಾರಿಕೆ, ಕಕ್ಕಬೆ ಪಂಚಾಯಿತಿ ಮಾಜಿ ಸದಸ್ಯ ರಜಾಕ್ ಕುಂಡಂಡ, ಊರಿನ ಹಿರಿಯರಾದ ಅಬ್ದುಲ್ ರಹಿಮಾನ್, ಹೆಮ್ಮೆಯ ದುಬೈ ಕನ್ನಡ ಸಂಘದ ಮುಖ್ಯ ಕಾರ್ಯದರ್ಶಿ ರಫೀಕಲಿ ಕುಂಡಂಡ ಹಾಗೂ ಶಾಲೆಯ ಅಭಿವೃದ್ಧಿ ಸಮಿತಿ (ಎಸ್‌ಡಿಎಂಸಿ)ಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸರ್ಕಾರಿ ಶಾಲೆಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಉತ್ತಮ ಕಲಿಕಾ ವಾತಾವರಣ ನಿರ್ಮಿಸುವುದು ಹಾಗೂ ಕನ್ನಡ ಮಾಧ್ಯಮ ಶಿಕ್ಷಣವನ್ನು ಪ್ರೋತ್ಸಾಹಿಸುವುದು ಸಂಘದ ಸೇವಾ ಕಾರ್ಯಗಳ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸಂಘವು ವಿವಿಧ ಪ್ರದೇಶಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳನ್ನು ನಿರಂತರವಾಗಿ ಕೈಗೊಳ್ಳುತ್ತಿದೆ.

















