ಮಡಿಕೇರಿ, NEWS DESK ಅ.12: ಮಡಿಕೇರಿ ದಸರಾ ಜನೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಮಾಡಲಾಗಿರುವ ವಿದ್ಯುತ್ ದೀಪಾಲಂಕಾರ ಅಸಮರ್ಪಕವಾಗಿದ್ದು, ವಿಜಯದಶಮಿ ದಿನ ದಶಮಂಟಪಗಳ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆಯಿದೆ ಎಂದು ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಪ್ರತಿವರ್ಷ ಮಡಿಕೇರಿ ದಸರಾ ಉತ್ಸವದ ಅಂಗವಾಗಿ ಹನ್ನೊಂದು ದಿನಗಳ ಕಾಲ ನಗರವನ್ನು ವಿದ್ಯುತ್ ದೀಪಾಲಂಕಾರದಿಂದ ಸಿಂಗರಿಸಲಾಗುತ್ತದೆ. ಈ ಹಿಂದೆ ರಸ್ತೆಗಳ ಬದಿಯಲ್ಲಿ ಟ್ಯೂಬ್‌ಲೈಟ್‌ಗಳನ್ನು ಸುರಕ್ಷಿತವಾಗಿ ಅಳವಡಿಸುವ ಮೂಲಕ ಬೆಳಕಿನ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಟ್ಯೂಬ್‌ಲೈಟ್‌ಗಳ ಬದಲಿಗೆ ಬಲ್ಬ್‌ಗಳ ಮಾಲೆಗಳನ್ನು ಅಳವಡಿಸಿರುವುದು ಸಮಸ್ಯೆಗೆ ಕಾರಣವಾಗಬಹುದು ಎಂದು ಸಮಿತಿ ತಿಳಿಸಿದೆ.
ಬಲ್ಬ್‌ಗಳ ಮಾಲೆಗಳನ್ನು ರಸ್ತೆಯ ಮೇಲ್ಭಾಗದಲ್ಲಿ ಅಳವಡಿಸಿರುವುದರಿಂದ ವಿಜಯದಶಮಿ ದಿನ ದಶಮಂಟಪಗಳ ಸಂಚಾರಕ್ಕೆ ತೊಂದರೆಯಾಗುವ ಆತಂಕವಿದೆ. ಮಂಟಪಗಳು ಸಾಗುವ ಸಂದರ್ಭದಲ್ಲಿ ಅನಿವಾರ್ಯವಾಗಿ ಬಲ್ಬ್‌ಗಳ ಮಾಲೆಗಳನ್ನು ತೆರವುಗೊಳಿಸಬೇಕಾಗುತ್ತದೆ. ಇದರಿಂದ ನಗರದ ಕೆಲವು ಭಾಗಗಳಲ್ಲಿ ಕತ್ತಲೆ ಆವರಿಸಿ ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗುವ ಸಾಧ್ಯತೆಯಿದೆ ಎಂದು ಸಮಿತಿ ಗಮನ ಸೆಳೆದಿದೆ.
ಈ ಹಿನ್ನೆಲೆಯಲ್ಲಿ ಅಲಂಕಾರ ಸಮಿತಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಸಮಸ್ಯೆಯನ್ನು ಪರಿಶೀಲಿಸಿ, ಹಿಂದಿನಂತೆ ಟ್ಯೂಬ್‌ಲೈಟ್‌ಗಳನ್ನು ಅಳವಡಿಸುವ ಮೂಲಕ ಸೂಕ್ತ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದೆ.
ಇದಲ್ಲದೆ, ನಗರದ ಕೆಲವು ವಿದ್ಯುತ್ ಅಲಂಕೃತ ದೇವರ ಫಲಕಗಳು ಭಾರೀ ಗಾಳಿಗೆ ಬೀಳುವ ಸ್ಥಿತಿಯಲ್ಲಿವೆ ಎಂದು ಸಮಿತಿ ಆತಂಕ ವ್ಯಕ್ತಪಡಿಸಿದೆ. ಸಂಬಂಧಪಟ್ಟವರು ತಕ್ಷಣವೇ ಅವುಗಳನ್ನು ಸರಿಪಡಿಸಿ, ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟುವಂತೆ ಮನವಿ ಮಾಡಿದೆ.
















