ಮಡಿಕೇರಿ, NEWS DESK ಅ. 12: ಮಡಿಕೇರಿ ದಸರಾ ಜನೋತ್ಸವದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಕಾಫಿ ದಸರಾದ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಎರಡು ದಿನಗಳ ಕಾಲ ನಡೆಯಲಿರುವ ಕಾಫಿ ದಸರಾದಲ್ಲಿ ಒಟ್ಟು 54 ಮಳಿಗೆಗಳ ಮೂಲಕ ಕಾಫಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ. ತಿಳಿಸಿದ್ದಾರೆ.
ಅ. 13ರಂದು ಮಂಗಳವಾರ ಸಂಜೆ 4 ಗಂಟೆಗೆ ಕಲಾಸಂಭ್ರಮ ಸಭಾಂಗಣದಲ್ಲಿ ಕಾಫಿ ದಸರಾ ಮಳಿಗೆಗಳನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಅಂದು ರಾತ್ರಿ 10 ಗಂಟೆಯವರೆಗೆ ಸಾರ್ವಜನಿಕರಿಗೆ ಮಳಿಗೆಗಳನ್ನು ವೀಕ್ಷಿಸಲು ಹಾಗೂ ಕಾಫಿ ಉತ್ಪನ್ನಗಳನ್ನು ಖರೀದಿಸಲು ಅವಕಾಶ ಕಲ್ಪಿಸಲಾಗಿದೆ.
60 ಪೌರಕಾರ್ಮಿಕರಿಗೆ ಸನ್ಮಾನ
ಇದೇ ಸಂದರ್ಭದಲ್ಲಿ ಸಂಜೆ 6 ಗಂಟೆಗೆ ಕಲಾಸಂಭ್ರಮ ವೇದಿಕೆಯಲ್ಲಿ ಮಡಿಕೇರಿ ನಗರದ ಸ್ವಚ್ಛತೆಯನ್ನು ಕಾಪಾಡುವ 60 ಪೌರಕಾರ್ಮಿಕರನ್ನು ಶಾಸಕ ಡಾ. ಮಂತರ್ ಗೌಡ ಸನ್ಮಾನಿಸಿ ಗೌರವಿಸಲಿದ್ದಾರೆ. ನಗರದ ಸ್ವಚ್ಛತೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಸ್ವಚ್ಛತಾ ರಾಯಭಾರಿಗಳನ್ನು ಕಾಫಿ ದಸರಾ ಮೂಲಕ ಗೌರವಿಸಲಾಗುತ್ತಿದೆ ಎಂದು ಅನಿಲ್ ಹೆಚ್.ಟಿ. ಮಾಹಿತಿ ನೀಡಿದ್ದಾರೆ.
ಅ. 14ರಂದು ಕಾಫಿ ದಸರಾ ಉದ್ಘಾಟನೆ
ಅ. 14ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಕಲಾಸಂಭ್ರಮ ವೇದಿಕೆಯಲ್ಲಿ ಕಾಫಿ ದಸರಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಕಾಫಿ ಕೃಷಿ ಹಾಗೂ ಕಾಫಿ ಕೆಫೆಗಳಿಗೆ ಸಂಬಂಧಿಸಿದ ಮಾಹಿತಿ ಗೋಷ್ಠಿಗಳು ಆಯೋಜನೆಯಾಗಲಿದ್ದು, ಸಾಧಕ 13 ಕಾಫಿ ಕೃಷಿಕರನ್ನು ಸನ್ಮಾನಿಸಲಾಗುತ್ತದೆ.
ಇದರೊಂದಿಗೆ ಎಂಟು ವಿಭಾಗಗಳಲ್ಲಿ ಕಾಫಿ ಖಾದ್ಯಗಳ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಕಾಫಿ ಉತ್ಪನ್ನಗಳ ವೈವಿಧ್ಯತೆ, ಕಾಫಿ ಕೃಷಿಯ ಮಹತ್ವ ಹಾಗೂ ಕಾಫಿ ಆಧಾರಿತ ಉದ್ಯಮಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಒದಗಿಸುವುದು ಕಾಫಿ ದಸರಾದ ಪ್ರಮುಖ ಉದ್ದೇಶವಾಗಿದೆ.
ಅ. 14ರಂದು ಕೂಡ ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಕಾಫಿ ಮಳಿಗೆಗಳು ಸಾರ್ವಜನಿಕರಿಗಾಗಿ ತೆರೆದಿರಲಿವೆ. ಕಾಫಿ ಪ್ರಿಯರು, ಕೃಷಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

















