ವಿರಾಜಪೇಟೆ, NEWS DESK ಅ.13: ತಮಿಳುನಾಡಿನ ಕೊಯಮತ್ತೂರಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಹಿರಿಯ ಕ್ರೀಡಾಪಟುಗಳ ಚಾಂಪಿಯನ್‌ಶಿಪ್‌ನಲ್ಲಿ ಕೊಡಗು ಜಿಲ್ಲೆಯ ಇಬ್ಬರು ಕ್ರೀಡಾಪಟುಗಳು ಪದಕಗಳನ್ನು ಗೆದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಕಾಕೋಟುಪರಂಬುವಿನ ಮುಲ್ಲೇರ ಪೊನ್ನಮ್ಮ ಪೂವಣ್ಣ ಅವರು 100 ಮೀಟರ್ ಓಟ, ಡಿಸ್ಕಸ್ ಥ್ರೋ ಹಾಗೂ ಶಾಟ್‌ಪುಟ್ ಸ್ಪರ್ಧೆಗಳಲ್ಲಿ ಭಾಗವಹಿಸಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅಲ್ಲದೆ, ಜಾವೆಲಿನ್ ಥ್ರೋ ಹಾಗೂ 4×100 ಮೀಟರ್ ಮಿಶ್ರ ರಿಲೇ ಸ್ಪರ್ಧೆಗಳಲ್ಲಿ ಎರಡು ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇದೇ ಚಾಂಪಿಯನ್‌ಶಿಪ್‌ನಲ್ಲಿ ಬಾಳೆಲೆಯ ಅರುಮಣಮಾಡ ಮಮತಾ ಮನು ಅವರು 4×100 ಮೀಟರ್ ರಿಲೇ ಸ್ಪರ್ಧೆಯಲ್ಲಿ ಭಾಗವಹಿಸಿ ಕಂಚಿನ ಪದಕವನ್ನು ಗೆದ್ದಿದ್ದಾರೆ.
ಇಬ್ಬರೂ ಕ್ರೀಡಾಪಟುಗಳು ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಕೊಡಗು ಜಿಲ್ಲೆಗೆ ಹೆಮ್ಮೆ ತಂದಿದ್ದು, ಕ್ರೀಡಾಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

















