ಸೋಮವಾರಪೇಟೆ, NEWS DESK ಅ.13: ಪಟ್ಟಣದ ಸೋಮೇಶ್ವರ ದೇವಾಲಯದ ಶಕ್ತಿಪಾರ್ವತಿ ಸನ್ನಿಧಿಯಲ್ಲಿ 21ನೇ ವರ್ಷದ ಶರನ್ನವರಾತ್ರಿ ಉತ್ಸವದ ಅಂಗವಾಗಿ ಎರಡನೇ ದಿನ ಮಾತಾ ಬ್ರಹ್ಮಚಾರಿಣಿ ದೇವಿಯ ಆರಾಧನೆ ವಿಶೇಷವಾಗಿ ನಡೆಯಿತು. ಈ ಸಂದರ್ಭದಲ್ಲಿ ಶಕ್ತಿಪಾರ್ವತಿ ದೇವಿಗೆ ವಿವಿಧ ತರಕಾರಿಗಳಿಂದ ಆಕರ್ಷಕ ಅಲಂಕಾರ ಮಾಡಲಾಗಿದ್ದು, ವಿಶೇಷ ಪೂಜೆ ನೆರವೇರಿಸಲಾಯಿತು.
ಅರ್ಚಕ ಚಿತ್ರಕುಮಾರ ಭಟ್ ಅವರ ಪುರೋಹಿತ್ವದಲ್ಲಿ ರಂಗಪೂಜೆ, ಅವರೋಣೋತ್ಸವ, ಉಯ್ಯಾಲೋತ್ಸವ ಸೇರಿದಂತೆ ವಿವಿಧ ಸೇವೆಗಳು ಜರುಗಿದವು. ಬಳಿಕ ಮಹಾಮಂಗಳಾರತಿ ನೆರವೇರಿಸಿ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ನಂತರ ‘ಎದೆತುಂಬಿ ಹಾಡುವೆನು’ ಖ್ಯಾತಿಯ ಪುರುಷೋತ್ತಮ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.
ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ನೂರಾರು ಭಕ್ತಾದಿಗಳು ಪಾಲ್ಗೊಂಡು ದೇವಿಯ ದರ್ಶನ ಪಡೆದು ಭಕ್ತಿಭಾವ ಮೆರೆದರು.

















