ಮಡಿಕೇರಿ, NEWS DESK ಅ. 13: ಪೊನ್ನಂಪೇಟೆ ತಾಲ್ಲೂಕಿನ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವೇಶನ ರಹಿತ ಬಡ ಕುಟುಂಬಗಳಿಗೆ ಆದಷ್ಟು ಶೀಘ್ರವಾಗಿ ಹಕ್ಕುಪತ್ರ ವಿತರಿಸಿ, ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಸಂಚಾಲಕ ಎಚ್.ಆರ್. ಪರಶುರಾಮ್ ಅವರು ಶಾಸಕರು ಹಾಗೂ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು ಆರು ಎಕರೆ ಪೈಸಾರಿ ಜಾಗವನ್ನು ನಿವೇಶನ ರಹಿತ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಮೀಸಲಿಡಲಾಗಿದೆ. ಕಳೆದ ಆರೇಳು ತಿಂಗಳಿನಿಂದ ಈ ಪ್ರದೇಶದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ಜೀವನ ಸಾಗಿಸುತ್ತಿರುವ ಸುಮಾರು 200 ಕುಟುಂಬಗಳ ಪೈಕಿ ಸಾಧ್ಯವಾದಷ್ಟು ಕುಟುಂಬಗಳಿಗೆ ಈ ಜಾಗವನ್ನು ಹಂಚಿಕೆ ಮಾಡಬೇಕು. ಉಳಿದ ಕುಟುಂಬಗಳಿಗೂ ಬೇರೆ ಪೈಸಾರಿ ಜಾಗವನ್ನು ಗುರುತಿಸಿ ನಿವೇಶನ ಒದಗಿಸಬೇಕೆಂದು ಮನವಿ ಮಾಡಿದರು.
ನಿವೇಶನ ಹಂಚಿಕೆ ಸಂದರ್ಭದಲ್ಲಿ ಬಿ. ಶೆಟ್ಟಿಗೇರಿ ಗ್ರಾಮದ ಅರ್ಹ ಫಲಾನುಭವಿಗಳಿಗೆ ಮೊದಲ ಆದ್ಯತೆ ನೀಡಬೇಕು. ಬಳಿಕ ತಾಲ್ಲೂಕಿನ ಇತರ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ಕಲ್ಪಿಸಬೇಕು. ಹೆಚ್ಚುವರಿ ಜಾಗ ಲಭ್ಯವಿದ್ದಲ್ಲಿ ಅದನ್ನು ಇತರರಿಗೆ ಹಂಚಿಕೆ ಮಾಡುವುದಕ್ಕೆ ಸಮಿತಿಯ ಯಾವುದೇ ಅಭ್ಯಂತರವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಪೈಸಾರಿ ಜಾಗದಲ್ಲಿ ತಾತ್ಕಾಲಿಕ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ಕುಟುಂಬಗಳು ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಈಗಾಗಲೇ ಗಮನ ಹರಿಸಿದ್ದಾರೆ. ಕುಡಿಯುವ ನೀರು ಒದಗಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಬೋರ್‌ವೆಲ್ ನಿರ್ಮಿಸಿಕೊಡುವ ಭರವಸೆಯನ್ನೂ ನೀಡಿದ್ದಾರೆ. ಅಲ್ಲದೆ, ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಸಂಗ್ರಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ತಿಳಿಸಿದರು.
ಶಾಸಕ ಎ.ಎಸ್. ಪೊನ್ನಣ್ಣ ಅವರು ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಪರಿಶಿಷ್ಟ ಪಂಗಡದ ಹಾಡಿಗಳಲ್ಲಿ ಸರ್ಕಾರದ ವತಿಯಿಂದ ಮನೆಗಳು ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಶಾಸಕರ ವಿರುದ್ಧ ಕೆಲವರು ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿ ಅಪಪ್ರಚಾರ ನಡೆಸುತ್ತಿರುವುದು ಸರಿಯಲ್ಲ ಎಂದು ಪರಶುರಾಮ್ ಇದೇ ಸಂದರ್ಭದಲ್ಲಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಪೊನ್ನಂಪೇಟೆ ತಾಲ್ಲೂಕು ಸಂಘಟನಾ ಸಂಚಾಲಕಿ ಲಕ್ಷ್ಮಿ, ಗೀತಾ, ತಾಲ್ಲೂಕು ಸಂಘಟನಾ ಸಂಚಾಲಕ ಜೆ.ಎ. ಹರೀಶ್ ಹಾಗೂ ಸದಸ್ಯ ಸಿಂಗ ಉಪಸ್ಥಿತರಿದ್ದರು.

















