ಮಡಿಕೇರಿ NEWS DESK ಅ.15 : ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಮಾಡಿರುವ ದೀಪಾಲಂಕಾರದ ಕುರಿತು ಸಾರ್ವಜನಿಕರಿಂದ ವ್ಯಕ್ತವಾಗುತ್ತಿರುವ ಅಸಮಾಧಾನದ ಬಗ್ಗೆ ಮಡಿಕೇರಿ ನಗರ ದಸರಾ ಅಲಂಕಾರ ಸಮಿತಿಯ ಅಧ್ಯಕ್ಷ ಮುನೀರ್ ಮಾಚಾರ್ ಅವರು ಸ್ಪಷ್ಟನೆ ನೀಡಿದ್ದಾರೆ. ನಗರದ ಪ್ರಮುಖ ರಸ್ತೆಗಳಲ್ಲಿ ದೀಪಾಲಂಕಾರ ಮಾಡುವ ಜವಾಬ್ದಾರಿಯನ್ನು ನಗರಸಭೆಯು ಪ್ರತಿವರ್ಷ ಟೆಂಡರ್ ಪಡೆದವರಿಗೆ ನೀಡುತ್ತದೆ. ಈ ವರ್ಷ ರಸ್ತೆ ದೀಪಾಲಂಕಾರದ ಟೆಂಡರ್ ಅನ್ನು ಬೆಂಗಳೂರಿನವರಿಗೆ ನೀಡಲಾಗಿದೆ. ಟೆಂಡರ್ ನೀಡುವ ಸಂದರ್ಭ ಅಲಂಕಾರ ಸಮಿತಿಯ ಅಭಿಪ್ರಾಯವನ್ನು ಪಡೆಯಲಾಗಿರಲಿಲ್ಲ. ಆದರೆ, ಇದೇ ಮೊದಲ ಬಾರಿಗೆ ಟೆಂಡರ್ ಪಡೆದವರಿಗೆ ಕೆಲವು ರಸ್ತೆಗಳನ್ನು ತೋರಿಸಿಕೊಡುವಂತೆ ಅಲಂಕಾರ ಸಮಿತಿಗೆ ತಿಳಿಸಲಾಗಿತ್ತು. ಅದರಂತೆ ಯಾವೆಲ್ಲ ರಸ್ತೆಗಳಲ್ಲಿ ದೀಪಾಲಂಕಾರ ಮಾಡಬೇಕು ಎಂಬುವುದನ್ನು ತಿಳಿಸಿಕೊಡಲಾಗಿದೆ ಎಂದು ಮುನೀರ್ ಮಾಚಾರ್ ಹೇಳಿದ್ದಾರೆ. ಕೆಲವು ರಸ್ತೆಗಳಲ್ಲಿ ದೀಪಾಲಂಕಾರ ಮಾಡಲು ಟೆಂಡರ್ ಪಡೆದವರು ತಮ್ಮ ಟೆಂಡರ್ ವ್ಯಾಪ್ತಿಯಲ್ಲಿ ಆ ರಸ್ತೆಗಳು ಬರುವುದಿಲ್ಲ ಹಾಗೂ ಈ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಹೇಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ದೀಪಾಲಂಕಾರ ಮಾಡಲೇಬೇಕೆಂದು ಅಲಂಕಾರ ಸಮಿತಿಯು ಒತ್ತಾಯಿಸುತ್ತಾ ಬಂದಿದೆ. ದೀಪಾಲಂಕಾರದ ವಿಚಾರದಲ್ಲಿ ಸಾರ್ವಜನಿಕರಿಗೆ ಆಗಿರುವ ಅಸಮಾಧಾನದಷ್ಟೇ ನೋವು ಅಲಂಕಾರ ಸಮಿತಿಗೂ ಆಗಿದೆ ಎಂದು ಅವರು ತಿಳಿಸಿದ್ದಾರೆ. ನಗರಸಭೆಯು ಟೆಂಡರ್ ನೀಡುವ ಸಂದರ್ಭದಲ್ಲಿ ಮಡಿಕೇರಿ ದಸರಾ ವ್ಯವಸ್ಥೆ ಹಾಗೂ ನಗರದ ದೀಪಾಲಂಕಾರದ ಅಗತ್ಯಗಳ ಬಗ್ಗೆ ಟೆಂಡರ್ ಪಡೆದವರಿಗೆ ಸ್ಪಷ್ಟ ಮಾಹಿತಿ ನೀಡಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಅಲಂಕಾರ ಸಮಿತಿಗೆ ಈವರೆಗೆ ದೀಪಾಲಂಕಾರದ ಸಂಪೂರ್ಣ ಜವಾಬ್ದಾರಿಯನ್ನು ನೀಡಿಲ್ಲ. ಹೀಗಿರುವಾಗ ಅಲಂಕಾರ ಸಮಿತಿ ಏನು ಮಾಡುತ್ತಿದೆ, ಎಲ್ಲಿ ಹೋಗಿದೆ ಎಂದು ಪ್ರಶ್ನಿಸುವುದು ಸರಿಯಲ್ಲ. ಟೆಂಡರ್ ಕರೆಯುವಾಗಲೇ ದೀಪಾಲಂಕಾರದ ಸಂಪೂರ್ಣ ಜವಾಬ್ದಾರಿಯನ್ನು ಅಲಂಕಾರ ಸಮಿತಿಗೆ ವಹಿಸಿದ್ದರೆ, ಸಾರ್ವಜನಿಕರ ಪ್ರಶ್ನೆಗಳಿಗೆ ಸಮಿತಿಯು ಸೂಕ್ತ ಉತ್ತರ ನೀಡಲು ಸಾಧ್ಯವಾಗುತ್ತಿತ್ತು ಎಂದು ಮುನೀರ್ ಮಾಚಾರ್ ಅಭಿಪ್ರಾಯಪಟ್ಟಿದ್ದಾರೆ.
*ಮುಂದಿನ ದಸರಾ ಟೆಂಡರ್ ಪ್ರಕ್ರಿಯೆಯಲ್ಲಿ ಬದಲಾವಣೆಗೆ ಆಗ್ರಹ*
ಮುಂದಿನ ದಸರಾ ಜನೋತ್ಸವದ ಸಂದರ್ಭದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸುವ ಮೊದಲು ದಸರಾ ಸಮಿತಿಯ ಎಲ್ಲಾ ಉಪಸಮಿತಿಗಳ ಪದಾಧಿಕಾರಿಗಳನ್ನು ಕರೆದು, ಅವರ ಅಭಿಪ್ರಾಯಗಳನ್ನು ಪಡೆದು ಟೆಂಡರ್ ಪ್ರಕ್ರಿಯೆ ನಡೆಸುವುದು ಸೂಕ್ತ. ಈ ರೀತಿ ಮಾಡುವುದರಿಂದ ಜವಾಬ್ದಾರಿಗಳ ಬಗ್ಗೆ ಸ್ಪಷ್ಟತೆ ಮೂಡುವುದರ ಜೊತೆಗೆ ದೀಪಾಲಂಕಾರದAತಹ ವಿಚಾರಗಳಲ್ಲಿ ಗೊಂದಲಗಳು ಉಂಟಾಗುವುದನ್ನು ತಪ್ಪಿಸಬಹುದು. ಅಲಂಕಾರ ಸಮಿತಿಗೆ ಸಂಪೂರ್ಣ ಜವಾಬ್ದಾರಿಯನ್ನು ನೀಡದೆ ಇರುವುದರಿಂದ ಟೀಕೆ ಮಾಡುತ್ತಿರುವವರು ವಾಸ್ತವಾಂಶಗಳನ್ನು ಹಾಗೂ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಮಾತನಾಡುವುದು ಸೂಕ್ತವೆಂದು ಮುನೀರ್ ಮಾಚಾರ್, ಗೌರವಾಧ್ಯಕ್ಷ ಪಿ.ಜಿ.ಮಂಜುನಾಥ್, ಉಪಾಧ್ಯಕ್ಷ ಕೋಚನ ಎಂ.ಚೇತನ್, ಪ್ರಧಾನ ಕಾರ್ಯದರ್ಶಿ ಬಿ.ಕೆ.ನವೀನ್, ಖಜಾಂಚಿ ಕೆ.ವಿ.ಪ್ರಸಾದ್ ಹಾಗೂ ಕಾರ್ಯದರ್ಶಿ ಜೆ.ಮೈಕಲ್ ಮಾರ್ಷಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. *ಶಾಸಕ ಮಂತರ್ ಗೌಡರಿಗೆ ಕೃತಜ್ಞತೆ* ಮಡಿಕೇರಿ ನಗರದ ಅಭಿವೃದ್ಧಿ ಹಾಗೂ ದಸರಾ ಮಹೋತ್ಸವದ ವ್ಯವಸ್ಥೆಗಾಗಿ ಶಾಸಕ ಡಾ.ಮಂತರ್ ಗೌಡ ಅವರು ತಮ್ಮ ಪ್ರಯತ್ನದ ಮೂಲಕ ರೂ.2 ಕೋಟಿ ಅನುದಾನ ಒದಗಿಸಿಕೊಟ್ಟಿರುವುದಕ್ಕೆ ಅಲಂಕಾರ ಸಮಿತಿಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿರುವ ಅವರು, ಈ ಅನುದಾನವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂಬುವುದು ಎಲ್ಲರ ಆಶಯವಾಗಿದೆ ಎಂದು ತಿಳಿಸಿದ್ದಾರೆ.

















