ನಾಪೋಕ್ಲು, NEWS DESK ಅ.15: ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ (ರಿ.) ಹಾಗೂ ವಾಹನ ಚಾಲಕರ ಸಂಘ ನಾಪೋಕ್ಲು (ರಿ.) ಇವುಗಳ ಜಂಟಿ ಆಶ್ರಯದಲ್ಲಿ 34ನೇ ವರ್ಷದ ಅದ್ಧೂರಿ ಆಯುಧ ಪೂಜಾ ಕಾರ್ಯಕ್ರಮವನ್ನು ಅಕ್ಟೋಬರ್ 20ರಂದು ಮಂಗಳವಾರ ನಾಪೋಕ್ಲುವಿನಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಪಿ. ಸುಕುಮಾರ್ ತಿಳಿಸಿದರು.
ನಾಪೋಕ್ಲುವಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಧ್ಯಾಹ್ನ 1.30ಕ್ಕೆ ಹಳೆ ತಾಲೂಕಿನಿಂದ ಅಲಂಕೃತ ವಾಹನಗಳ ಮೆರವಣಿಗೆ ಆರಂಭವಾಗಲಿದೆ. ಸಂಜೆ 4 ಗಂಟೆಗೆ ನಾಪೋಕ್ಲುವಿನ ಮಾರುಕಟ್ಟೆ ಆವರಣದಲ್ಲಿ ಸಾಮೂಹಿಕ ಆಯುಧ ಪೂಜೆ ನೆರವೇರಲಿದ್ದು, ಬಳಿಕ ಸಭಾ ಕಾರ್ಯಕ್ರಮ ಹಾಗೂ ಪ್ರಖ್ಯಾತ ಮಹಾ ನವಮಿ ಕಲಾವಿದರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಟಿ.ಪಿ. ಸುಕುಮಾರ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ, ಹೊದ್ದೂರು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎ. ಹಂಸ, ಪಂಚಾಯಿತಿ ಮಾಜಿ ಅಧ್ಯಕ್ಷರಾದ ಕಲಿಯಂಡ ಸಂಪಾ ಅಯ್ಯಪ್ಪ ಹಾಗೂ ಕೆ.ಎ. ಇಸ್ಮಾಯಿಲ್, ನಿವೃತ್ತ ವೈದ್ಯ ಹಾಗೂ ನಂದಿನಿ ಆಸ್ಪತ್ರೆಯ ವೈದ್ಯರಾದ ಡಾ. ಹೆಚ್.ವಿ. ದೇವದಾಸ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಸೌಕತ್ ಅಲಿ, ಬಲಮುರಿ ಗ್ರಾಮದ ಕಾಫಿ ಬೆಳೆಗಾರ ಬೊಳ್ಳಚೆಟ್ಟಿರ ಸುರೇಶ್, ನಾಪೋಕ್ಲು ವಿ.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಅಂಕುರ್ ಪಬ್ಲಿಕ್ ಸ್ಕೂಲ್ ಕಾರ್ಯದರ್ಶಿ ಕೇಟೋಳಿರ ರತ್ನಾಚರ್ಮಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಮಾಪ್ರಭು, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ತಿರೋಡಿರ ನಿರೂಪ್, ನಾಪೋಕ್ಲು ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ. ಪ್ರತೀಪ್, ಕೊಣಂಜಗೇರಿ ಮಾಜಿ ಪಂಚಾಯಿತಿ ಸದಸ್ಯ ನಾಯಕಂಡ ಮುತ್ತಣ್ಣ, ಗೂಡ್ಸ್ ವಾಹನ ಮಾಲೀಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಪಿ.ಕೆ. ಅನಿಲ್, ಮೂರ್ನಾಡು ನಕ್ಷತ್ರ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಉಮೇಶ್ ಬಂಗೇರ, ಗುತ್ತಿಗೆದಾರ ಬಿ.ಆರ್. ಜಲೇಂದ್ರ, ನಾಪೋಕ್ಲು ಸೆಂಟ್ ಮೇರಿಸ್ ಚರ್ಚ್ನ ಫಾದರ್ ವಿಕ್ಟರ್, ಸಂಘದ ಸಲಹೆಗಾರ ಅಚ್ಚಾಂಡಿರ ಪವನ್ ಪೆಮ್ಮಯ್ಯ, ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಲಹೆಗಾರ ಬಿದ್ದಾಟಂಡ ರೋಜಿ ಚಿಣ್ಣಪ್ಪ, ಪತ್ರಕರ್ತ ಹಾಗೂ ಸಲಹೆಗಾರ ದುಗ್ಗಳ ಸದಾನಂದ ಮತ್ತು ಸಂಘದ ಗೌರವಾಧ್ಯಕ್ಷ ಅಬ್ದುಲ್ ರಜಾಕ್ (ಗುಂಡು) ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಡಾ. ಹೆಚ್.ವಿ. ದೇವದಾಸ್ ಅವರಿಗೆ ಸನ್ಮಾನ
ಈ ವರ್ಷದ ಕಾರ್ಯಕ್ರಮದಲ್ಲಿ ವಿಶೇಷವಾಗಿ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ನಿವೃತ್ತ ವೈದ್ಯ ಹಾಗೂ ದಾನಿ ಡಾ. ಹೆಚ್.ವಿ. ದೇವದಾಸ್ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದು ಸುಕುಮಾರ್ ತಿಳಿಸಿದರು.
ಅಲ್ಲದೆ, ವಿಶೇಷವಾಗಿ ಅಲಂಕರಿಸಲಾದ ಸೈಕಲ್ಗಳು, ದ್ವಿಚಕ್ರ ವಾಹನಗಳು, ಆಟೋಗಳು, ನಾಲ್ಕು ಚಕ್ರದ ವಾಹನಗಳು, ಟ್ರ್ಯಾಕ್ಟರ್ಗಳು ಹಾಗೂ ವರ್ಕ್ಶಾಪ್ಗಳ ಅಲಂಕಾರಗಳಿಗೆ ಪ್ರತ್ಯೇಕ ಟ್ರೋಫಿ ಮತ್ತು ಬಹುಮಾನಗಳನ್ನು ನೀಡಲಾಗುವುದು. ಚಾಲಕರು, ವಾಹನ ಮಾಲೀಕರು ಹಾಗೂ ಅಲಂಕಾರಕಾರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸಮಸ್ತ ಚಾಲಕರು, ವಾಹನ ಮಾಲೀಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸತೀಶ ಎ.ಯು., ಪ್ರಧಾನ ಕಾರ್ಯದರ್ಶಿ ಹಂಸ ಬಿ.ಎಂ., ಖಜಾಂಚಿ ಚೇತನ್ ಎ.ಎಂ., ಗೌರವಾಧ್ಯಕ್ಷ ಅಬ್ದುಲ್ ರಜಾಕ್ ಹಾಗೂ ಸಮಿತಿ ಸದಸ್ಯರಾದ ಶ್ರೀಜೇಶ್ ಮತ್ತು ಆನಂದ ಉಪಸ್ಥಿತರಿದ್ದರು.
— ದುಗ್ಗಳ ಸದಾನಂದ

















