ಕುಶಾಲನಗರ, NEWS DESK ಅ. 15: ಕುಶಾಲನಗರದಲ್ಲಿ ಡಿಸೆಂಬರ್ 22ರಂದು ಅದ್ದೂರಿಯಾಗಿ ಹನುಮ ಜಯಂತಿ ಆಚರಿಸಲು ಹನುಮ ಜಯಂತಿ ದಶಮಂಟಪಗಳ ಸಮಿತಿಯ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ಅವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾನೂನು ಸುವ್ಯವಸ್ಥೆಗೆ ಯಾವುದೇ ತೊಂದರೆಯಾಗದಂತೆ ಹಾಗೂ ಸಾರ್ವಜನಿಕರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಶ್ರದ್ಧಾಭಕ್ತಿಯಿಂದ ಹನುಮ ಜಯಂತಿ ಆಚರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ರಥಬೀದಿಯ ಆಂಜನೇಯ ದೇವಸ್ಥಾನದ ಹನುಮ ಉತ್ಸವ ಮೂರ್ತಿಯ ಮಂಟಪದೊಂದಿಗೆ ಎಚ್ಆರ್ಪಿ ಕಾಲೊನಿ, ಗೋಪಾಲ್ ಸರ್ಕಲ್, ಗುಡ್ಡೆಹೊಸೂರು, ಮಾದಪಟ್ಟಣ, ಕೂಡಿಗೆ, ಇಂದಿರಾ ಬಡಾವಣೆ, ಹಾರಂಗಿ, ಚಿಕ್ಕತ್ತೂರು ಸೇರಿದಂತೆ ವಿವಿಧ ಮಂಟಪಗಳ ಪಾಲ್ಗೊಳ್ಳುವಿಕೆ ಕುರಿತು ಚರ್ಚಿಸಲಾಯಿತು. ಇದರೊಂದಿಗೆ ಈ ಬಾರಿ ಕೆಲವು ಹೊಸ ಮಂಟಪಗಳನ್ನು ಸೇರ್ಪಡೆಗೊಳಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು.
ಈ ವರ್ಷ ಕಾರು ನಿಲ್ದಾಣದಲ್ಲಿ ವೇದಿಕೆ ನಿರ್ಮಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಸಮಿತಿಯ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ ತಿಳಿಸಿದರು.
ಸಭೆಯಲ್ಲಿ ಕಳೆದ ವರ್ಷದ ಲೆಕ್ಕಪತ್ರವನ್ನು ಮಂಡಿಸಿದ ಕೋಶಾಧಿಕಾರಿ ಡಿ.ವಿ. ಗಿರೀಶ್, ₹17 ಸಾವಿರಕ್ಕೂ ಅಧಿಕ ಉಳಿತಾಯವಾಗಿರುವುದಾಗಿ ತಿಳಿಸಿದರು.
ಸಮಿತಿಯ ಉಪಾಧ್ಯಕ್ಷರಾದ ಹೆಚ್.ಟಿ. ವಸಂತ್, ಟಿ.ವಿ. ಕಿಶೋರ್, ಎನ್.ಇ. ಬಾಲಕೃಷ್ಣ, ಕಾರ್ಯದರ್ಶಿ ಪಿ.ಆರ್. ರಾಮನಾಥನ್, ಸಹಕಾರ್ಯದರ್ಶಿ ಸುನೀಲ್ ಕುಮಾರ್ ಹಾಗೂ ನಿರ್ದೇಶಕರಾದ ಕೆ.ಎಸ್. ನಾಗೇಶ್, ಕೆ.ಎನ್. ದೇವರಾಜ್, ಕೆ.ಜಿ. ಮನು, ವಿಮಲ್, ವಸಂತ್ ರೈ, ಚಂದ್ರಶೇಖರ್ ಹೇರೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

















