ಮಡಿಕೇರಿ, NEWS DESK ಅ.15: ಮಡಿಕೇರಿ ಜನೋತ್ಸವದ ಪ್ರಯುಕ್ತ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಅಕ್ಟೋಬರ್ 16ರಂದು ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ 13ನೇ ವರ್ಷದ ಮಕ್ಕಳ ದಸರಾ ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಎಸ್.ಜಿ. ಸೋಮಶೇಖರ್ ಅವರು ಮಕ್ಕಳ ದಸರಾವನ್ನು ಉದ್ಘಾಟಿಸಲಿದ್ದಾರೆ. ಮಕ್ಕಳ ಸಂತೆ ಹಾಗೂ ಅಂಗಡಿ ಸ್ಪರ್ಧೆಯನ್ನು ರೋಟರಿ ಜಿಲ್ಲೆ 3181ರ ರಾಜ್ಯಪಾಲ ಸತೀಶ್ ಭೋಳಾರ್ ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ರೋಟರಿ ವಲಯ 6ರ ಸಹಾಯಕ ಗವರ್ನರ್ ಎಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಮಧುಸೂದನ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಆರ್. ರಾಜೇಶ್, ಕಾರ್ಯದರ್ಶಿ ಡಾ. ಜಿ.ಡಿ. ಚೇತನ್, ಮಡಿಕೇರಿ ನಗರಸಭೆ ಅಧ್ಯಕ್ಷೆ ಪಿ. ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ ಹಾಗೂ ಖಜಾಂಚಿ ಸಬಿತಾ ಪಾಲ್ಗೊಳ್ಳಲಿದ್ದಾರೆ ಎಂದು ಮಕ್ಕಳ ದಸರಾ ಸಂಚಾಲಕ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ಮಕ್ಕಳ ಸಂತೆ, ಮಕ್ಕಳ ಅಂಗಡಿ, ಛದ್ಮವೇಷ, ಕ್ಲೇ ಮಾಡೆಲಿಂಗ್ ಹಾಗೂ ಮಂಟಪ ರಚನೆ ಸೇರಿದಂತೆ ವಿವಿಧ ಸ್ಪರ್ಧೆಗಳು ಮಕ್ಕಳನ್ನು ಆಕರ್ಷಿಸಲಿವೆ.
ಪ್ರತಿವರ್ಷದಂತೆ ಈ ಬಾರಿಯೂ ನೂರಾರು ಮಕ್ಕಳು ಮಕ್ಕಳ ದಸರಾ ಸಂಭ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಅನಿಲ್ ತಿಳಿಸಿದ್ದಾರೆ.

















