ಮಡಿಕೇರಿ, NEWS DESK ಅ.17: ಮೈಸೂರು ದಸರಾ ಕಾರ್ಯಕ್ರಮದ ಅಂಗವಾಗಿ ಈ ಬಾರಿ ಕರಾವಳಿಯ ಪ್ರಸಿದ್ಧ ಜಾನಪದ ಕ್ರೀಡೆಯಾದ ಕಂಬಳವನ್ನು ಆಯೋಜಿಸಲಾಗಿದ್ದು, ಕಂಬಳದಲ್ಲಿ ಪಾಲ್ಗೊಳ್ಳಲು ತೆರಳುವ ಕೋಣಗಳಿಗೆ ಮಡಿಕೇರಿಯಲ್ಲಿ ತುಳುಕೂಟ ಕೊಡಗು ಸೇರಿದಂತೆ ತುಳುಭಾಷಿಕ ಸಂಘಟನೆಗಳು ಸ್ವಾಗತ ನೀಡಲಿವೆ.
ಅ.17ರ ಶನಿವಾರ ಬೆಳಿಗ್ಗೆ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕೋಣಗಳ ತಂಡ ಮಡಿಕೇರಿ ನಗರದ ಮೂಲಕ ಕುಶಾಲನಗರಕ್ಕೆ ತೆರಳಲಿದೆ. ಕುಶಾಲನಗರದಲ್ಲಿ ಕೋಣಗಳಿಗೆ ಮೂರು ಗಂಟೆಗಳ ಕಾಲ ವಿಶ್ರಾಂತಿ ನೀಡಲಾಗುತ್ತದೆ. ಈ ಕಂಬಳ ಕ್ರೀಡೆಯಲ್ಲಿ ಸುಮಾರು 150 ಜೋಡಿ ಕೋಣಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಈ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಶನಿವಾರ ಬೆಳಿಗ್ಗೆ 11.30ಕ್ಕೆ ಟೋಲ್ಗೇಟ್ ವೃತ್ತದಲ್ಲಿ ಕೋಣಗಳಿಗೆ ಸ್ವಾಗತ ಕೋರಲು ತುಳುಕೂಟ ಕೊಡಗು ಸೇರಿದಂತೆ ತುಳುಭಾಷಿಕ ಸಂಘಟನೆಗಳು ಸಜ್ಜಾಗಿವೆ.
ಈ ಕಾರ್ಯಕ್ರಮಕ್ಕೆ ಪತ್ರಕರ್ತರು ಹಾಗೂ ಮಾಧ್ಯಮ ಮಿತ್ರರು ಸಹಕರಿಸಿ, ಕಾರ್ಯಕ್ರಮದ ಮಾಹಿತಿಯನ್ನು ಸಾರ್ವಜನಿಕರಿಗೆ ತಲುಪಿಸುವಂತೆ ತುಳುಕೂಟ ಕೊಡಗಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಮಾಡಿದ್ದಾರೆ.



































