ಮಡಿಕೇರಿ NEWS DESK ಅ.22 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕೊಡಗು ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದಲ್ಲಿ ಶಕ್ತಿ ದಿನಪತ್ರಿಕೆಯ ಸ್ಥಾಪಕ ಸಂಪಾದಕರು ಹಾಗೂ ಸಾಹಿತಿಗಳಾಗಿದ್ದ ದಿವಂಗತ ಬಿ.ಎಸ್. ಗೋಪಾಲಕೃಷ್ಣ ಅವರ ಹೆಸರಿನ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಅಕ್ಟೋಬರ್ 24ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ಮಡಿಕೇರಿಯ ಕೊಡಗು ಪತ್ರಿಕಾ ಭವನದ ಸಭಾಂಗಣದಲ್ಲಿ ನಡೆಯಲಿದೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಜಿಲ್ಲೆಯ ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಉದ್ಘಾಟಿಸಲಿದ್ದಾರೆ. *‘ರಾಜಕೀಯ ಮತ್ತು ಪ್ರಕೃತಿ’ ಕೃತಿಗೆ ಪ್ರಶಸ್ತಿ* ಮೂರನೇ ವರ್ಷದ ದಿವಂಗತ ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿಗೆ ಸಾಹಿತಿ ಹಾಗೂ ವಕೀಲರಾದ ಬಾಳೆಯಡ ಕಿಶನ್ ಪೂವಯ್ಯ ಅವರು ರಚಿಸಿರುವ ‘ರಾಜಕೀಯ ಮತ್ತು ಪ್ರಕೃತಿ’ ಕೃತಿ ಆಯ್ಕೆಯಾಗಿದೆ. ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಪ್ರಶಸ್ತಿ ಪ್ರದಾನ ಮಾಡಿ ಕಿಶನ್ ಪೂವಯ್ಯ ಅವರನ್ನು ಗೌರವಿಸಲಿದ್ದಾರೆ. ಪ್ರಶಸ್ತಿ ಪುರಸ್ಕೃತ ಕೃತಿಯ ಕುರಿತು ಗಡಿನಾಡು ಸಂಚಾರಿ ಪತ್ರಿಕೆಯ ಸಂಪಾದಕ ಟಿ.ಪಿ. ರಮೇಶ್ ಮಾತನಾಡಲಿದ್ದಾರೆ. ಕಾರ್ಯಕ್ರಮದಲ್ಲಿ ದತ್ತಿದಾನಿಗಳೂ, ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರೂ ಆದ ಬಿ.ಜಿ. ಅನಂತಶಯನ, ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ. ಅನಿಲ್ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ. *ಈ ಹಿಂದಿನ ಪ್ರಶಸ್ತಿ ಪುರಸ್ಕೃತರು* ದಿವಂಗತ ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿಯ ಪ್ರಥಮ ಪುರಸ್ಕಾರವನ್ನು ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರ ‘ಕಾವೇರಿ ವೈಭವ’ ಕೃತಿ ಪಡೆದುಕೊಂಡಿತ್ತು. ಎರಡನೇ ವರ್ಷದ ಪ್ರಶಸ್ತಿಯು ಡಾ. ಕೆ.ಬಿ. ಸೂರ್ಯಕುಮಾರ್ ಅವರು ರಚಿಸಿದ ‘ವೈದ್ಯ ಕಂಡ ವಿಸ್ಮಯ’ ಕೃತಿಗೆ ಲಭಿಸಿತ್ತು. ಇದೀಗ ಮೂರನೇ ವರ್ಷದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಈ ಕುರಿತು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















