ಸುಂಟಿಕೊಪ್ಪ, NEWS DESK ಅ. 24: ಕೇವಲ ನವರಾತ್ರಿ ಸಂದರ್ಭದಲ್ಲಿ ಮಾತ್ರ ಒಳಿತನ್ನು ಬಯಸದೆ, ವರ್ಷದ ಎಲ್ಲ ದಿನಗಳಲ್ಲಿಯೂ ಪರಸ್ಪರ ಸಹಕಾರ ನೀಡುತ್ತಾ ಒಳಿತನ್ನು ಮಾಡಿದರೆ ಪ್ರತಿಯೊಬ್ಬರೂ ಆನಂದ, ಆರೋಗ್ಯ, ಶಾಂತಿ ಮತ್ತು ಸಮಾಧಾನದಿಂದ ಬದುಕು ಸಾಗಿಸಲು ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.
ಮಾದಾಪುರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಆಯುಧ ಪೂಜಾ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ 6ನೇ ವರ್ಷದ ಅದ್ದೂರಿ ಆಯುಧ ಪೂಜಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಾದಾಪುರ ಸಾರ್ವಜನಿಕ ಆಯುಧ ಪೂಜಾ ಸಮಿತಿಯವರು ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇಂತಹ ಜನಪರ ಕಾರ್ಯಕ್ರಮಗಳಿಗೆ ಸದಾ ತಮ್ಮ ಸಹಕಾರ ಇರಲಿದ್ದು, ಸಮಿತಿಯೊಂದಿಗೆ ತಾವು ಇರುವುದಾಗಿ ಶಾಸಕ ಡಾ. ಮಂತರ್ ಗೌಡ ತಿಳಿಸಿದರು.
ಕಾರ್ಯಕ್ರಮದ ಮತ್ತೋರ್ವ ಉದ್ಘಾಟಕ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಕಳೆದ ಬಾರಿ ಆಯುಧ ಪೂಜಾ ಸಮಿತಿ ಹಾಗೂ ದಾನಿಗಳ ಸಹಕಾರದಿಂದ ಮಾದಾಪುರಕ್ಕೆ ಉಚಿತ ಆಂಬುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ತುರ್ತು ಸಂದರ್ಭಗಳಲ್ಲಿ ಅನುಕೂಲವಾಗುತ್ತಿದೆ ಎಂದು ತಿಳಿಸಿದರು. ಸಮಿತಿಯ ಜನೋಪಯೋಗಿ ಕಾರ್ಯಗಳನ್ನು ಅವರು ಶ್ಲಾಘಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಾರ್ವಜನಿಕ ಆಯುಧ ಪೂಜಾ ಆಚರಣಾ ಸಮಿತಿಯ ಅಧ್ಯಕ್ಷ ವಿ. ಕುಮಾರ್ ವಹಿಸಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಡಾ. ಮಂತರ್ ಗೌಡ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮಂಗಳೂರಿನ ವಿಶ್ವಾಸ್ ಮ್ಯೂಸಿಕ್ ತಂಡದ ಗಾಯಕರಿಂದ ನಡೆದ ಸಂಗೀತ ರಸಮಂಜರಿ ಹಾಗೂ ವಿವಿಧ ಕಲಾತಂಡಗಳ ನೃತ್ಯ ಪ್ರದರ್ಶನಗಳು ಪ್ರೇಕ್ಷಕರ ಮನಸೂರೆಗೊಂಡವು.
ಕಾರ್ಯಕ್ರಮದಲ್ಲಿ ಹರಪಳ್ಳಿ ರವೀಂದ್ರ, ಎಡಿಕೇರಿ ಪ್ರಸನ್ನ, ರಮೇಶ್ ಸುವರ್ಣ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ್, ಮಕ್ಕಂದೂರು ಕೆ. ರವಿ ನಾಯರ್, ಮನು ಮೇದಪ್ಪ, ಜಾನ್ಸನ್ ಪಿಂಟೋ, ಸಂಜು ಪೊನ್ನಪ್ಪ, ಕೊಕ್ಕಲೆರ ಸುಜು ತಿಮ್ಮಯ್ಯ, ಮನು ಮುದ್ದಪ್ಪ, ವಿಶ್ವ ಕುಂಬೂರು, ನಾಗಂಡ ಭವೀನ್, ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಶೀಲಾ ಶಶಿ ಮತ್ತು ಮನು ಬಿದ್ದಪ್ಪ, ಉಪಾಧ್ಯಕ್ಷ ಸುರೇಶ್ ವಿ.ಆರ್., ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ನಾಗಂಡ ಭವೀನ್, ಕುಟ್ಟಂಡ ಕೆ. ಕುಟ್ಟಪ್ಪ, ತಿಲಕ್ ಕುಮಾರ್, ದೇಚಮ್ಮ ಎಂ.ಕೆ., ಲತೀಫ್ ಕೆ.ಎ., ಅಯ್ಯಪ್ಪ ಸೇವಾ ಸಮಿತಿಯ ಕಾರ್ಯದರ್ಶಿ ಅಶೋಕ ಎಂ.ಬಿ., ವಿಜು ನಂಜಪ್ಪ ಸೇರಿದಂತೆ ಮಾದಾಪುರ ಸಾರ್ವಜನಿಕ ಆಯುಧ ಪೂಜಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಎಚ್.ಆರ್. ನಿಶಾಂತ್ ಪ್ರಾರ್ಥಿಸಿದರು. ಆಯುಧ ಪೂಜಾ ಆಚರಣಾ ಸಮಿತಿಯ ಖಜಾಂಚಿ ಸತೀಶ್ ಕುಮಾರ್ ಸ್ವಾಗತಿಸಿದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

















