ಮಡಿಕೇರಿ, NEWS DESK ಅ. 28: ಆತಿಥ್ಯಕ್ಕೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು. ಅಲ್ಲದೆ, ಜಿಲ್ಲಾಮಟ್ಟದಲ್ಲಿ ಪರಿಹರಿಸಲಾಗದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಭರವಸೆ ನೀಡಿದರು.
ಗಾಳಿಬೀಡು ಸಮೀಪದ ಆಹಾನ್ ಹಿಲ್ಸ್ ರೆಸಾರ್ಟ್‌ನಲ್ಲಿ ನಡೆದ ಕೂರ್ಗ್ ಹೋಂಸ್ಟೇಸ್ ಅಸೋಸಿಯೇಷನ್‌ನ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ವರ್ಷದಿಂದ ವರ್ಷಕ್ಕೆ ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು, ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಹೋಂಸ್ಟೇಗಳ ಪಾತ್ರ ಮಹತ್ವದ್ದಾಗಿದೆ. ಪ್ರವಾಸಿಗರಿಗೆ ಗುಣಮಟ್ಟದ ಆತಿಥ್ಯ ನೀಡುವ ಮೂಲಕ ಅವರು ಮತ್ತೆ ಮತ್ತೆ ಜಿಲ್ಲೆಗೆ ಭೇಟಿ ನೀಡುವಂತಹ ವಾತಾವರಣ ನಿರ್ಮಿಸಬೇಕು. ಪ್ರವಾಸೋದ್ಯಮದ ಅಭಿವೃದ್ಧಿಗೆ ಎಲ್ಲರ ಸಹಕಾರ ಮತ್ತು ಸಲಹೆಗಳು ಅಗತ್ಯವಾಗಿವೆ. ಹೋಂಸ್ಟೇಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಕ್ತವಾಗಿ ತಮ್ಮ ಗಮನಕ್ಕೆ ತರಬಹುದು. ಜಿಲ್ಲಾಡಳಿತದ ಮೂಲಕ ಪರಿಹರಿಸಲಾಗದ ಸಮಸ್ಯೆಗಳನ್ನು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅಗತ್ಯ ಸಹಕಾರ ಒದಗಿಸಲಾಗುವುದು ಎಂದು ತಿಳಿಸಿದರು.
ಕೊಡಗು ಜಿಲ್ಲೆಗೆ ವಾರ್ಷಿಕವಾಗಿ 50 ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸುತ್ತಿದ್ದು, ವಾಹನಗಳ ನಿಲುಗಡೆಗೆ ತೀವ್ರ ಸಮಸ್ಯೆ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಕುರಿತು ಚಿಂತನೆ ನಡೆಸಬೇಕಾಗಿದೆ. ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಆವರಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣ, ಗಾಂಧಿ ಮೈದಾನದ ವ್ಯಾಪ್ತಿ ಹಾಗೂ ಖಾಸಗಿ ಬಸ್ ನಿಲ್ದಾಣದ ಸಮೀಪ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಸಾಧ್ಯತೆಗಳಿವೆ. ಕಾವೇರಿ ಕಲಾಕ್ಷೇತ್ರವಿದ್ದ ಸ್ಥಳದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್ ಸಂಕೀರ್ಣ ನಿರ್ಮಾಣವಾಗುತ್ತಿದ್ದು, ಇದರಿಂದ ಸಮಸ್ಯೆ ಸ್ವಲ್ಪಮಟ್ಟಿಗೆ ಪರಿಹಾರವಾಗುವ ನಿರೀಕ್ಷೆಯಿದೆ ಎಂದರು.
ಹೋಂಸ್ಟೇಗಳ ಸುರಕ್ಷತೆ ಹಾಗೂ ಮಾಲೀಕರ ಹಿತದೃಷ್ಟಿಯಿಂದ ಅಧಿಕಾರಿಗಳು ಮಾಹಿತಿ ಕೇಳಿದಾಗ ಅಗತ್ಯ ವಿವರಗಳನ್ನು ಒದಗಿಸಿ ಸಹಕರಿಸಬೇಕು. ಹೋಂಸ್ಟೇಗಳ ಸಂಪೂರ್ಣ ಮಾಹಿತಿ ಜಿಲ್ಲಾಡಳಿತಕ್ಕೆ ಅಗತ್ಯವಿದ್ದು, ತೊಂದರೆ ನೀಡುವ ಉದ್ದೇಶದಿಂದ ಮಾಹಿತಿ ಸಂಗ್ರಹಿಸಲಾಗುತ್ತಿಲ್ಲ. ಎಲ್ಲರೂ ನಿಯಮಗಳನ್ನು ಪಾಲಿಸುವುದರೊಂದಿಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ನಿಯಮಗಳ ಪಾಲನೆಯಿಂದ ಮೂಲಸೌಕರ್ಯಗಳನ್ನು ಒದಗಿಸಲು ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ನೀಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಹೋಂಸ್ಟೇಗಳ ಸುರಕ್ಷತೆಗೆ ಆದ್ಯತೆ ನೀಡಿ: ಎಸ್‌ಪಿ ಬಿಂದುಮಣಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್. ಬಿಂದುಮಣಿ ಮಾತನಾಡಿ, ಹೋಂಸ್ಟೇಗಳು ಹಾಗೂ ಪ್ರವಾಸಿಗರ ಸುರಕ್ಷತೆಗೆ ಪೊಲೀಸ್ ಇಲಾಖೆ ಬದ್ಧವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೋಂಸ್ಟೇ ಮಾಲೀಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹೋಂಸ್ಟೇಗಳಿಗೆ ಆಗಮಿಸುವ ಅತಿಥಿಗಳ ಹಿನ್ನೆಲೆ ತಿಳಿದುಕೊಳ್ಳಬೇಕು. ಅಗತ್ಯ ದಾಖಲೆಗಳ ಪ್ರತಿಗಳನ್ನು ಪರಿಶೀಲಿಸಬೇಕು. ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವುದರೊಂದಿಗೆ ಹೋಂಸ್ಟೇಗಳ ನೋಂದಣಿ ಮಾಡಿಸಿರಬೇಕು. ಸಿಬ್ಬಂದಿ ನೇಮಕಾತಿಯ ಸಂದರ್ಭದಲ್ಲಿಯೂ ಎಚ್ಚರಿಕೆ ವಹಿಸಬೇಕು. ಜಿಲ್ಲೆಯಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ಪಾರ್ಕಿಂಗ್ ವ್ಯವಸ್ಥೆಗೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಮಡಿಕೇರಿ ನಗರದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತದೊಂದಿಗೆ ಚಿಂತನೆ ನಡೆಸಲಾಗುತ್ತಿದ್ದು, ಈ ಪ್ರಯತ್ನಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಯಾವುದೇ ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎಂಬುದಕ್ಕೆ ಕೊಡಗು ಸಾಕ್ಷಿಯಾಗಿದೆ. ಹೋಂಸ್ಟೇ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಹಿರಿಯರು ತೊಡಗಿಸಿಕೊಂಡಿರುವುದು ತಮಗೆ ಪ್ರೇರಣೆ ನೀಡಿದೆ. ವಿವಿಧ ಕಾರ್ಯಕ್ರಮಗಳಲ್ಲಿ 50 ವರ್ಷ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಮೆಚ್ಚುಗೆಯ ಸಂಗತಿ ಎಂದು ಬಿಂದುಮಣಿ ತಿಳಿಸಿದರು.
ನೋಂದಣಿಯಿಂದ ಹಲವು ಪ್ರಯೋಜನಗಳು: ಮೋಂತಿ ಗಣೇಶ್
ಸಭೆಯ ಅಧ್ಯಕ್ಷತೆ ವಹಿಸಿದ್ದ ಕೂರ್ಗ್ ಹೋಂಸ್ಟೇಸ್ ಅಸೋಸಿಯೇಷನ್‌ನ ಅಧ್ಯಕ್ಷೆ ಮೋಂತಿ ಗಣೇಶ್ ಮಾತನಾಡಿ, ಎಲ್ಲ ಹೋಂಸ್ಟೇಗಳು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಈಗಾಗಲೇ ನೋಂದಣಿ ಮಾಡಿಕೊಂಡಿರುವವರು ತಮ್ಮ ಅಕ್ಕಪಕ್ಕದ ಹೋಂಸ್ಟೇ ಮಾಲೀಕರಿಗೂ ನೋಂದಣಿ ಮಾಡಿಸಿಕೊಳ್ಳುವಂತೆ ಮನವೊಲಿಸಬೇಕು. ನೋಂದಣಿಯಿಂದ ಹಲವು ಪ್ರಯೋಜನಗಳಿವೆ ಎಂದು ವಿವರಿಸಿದರು.
ಅಸೋಸಿಯೇಷನ್‌ನ ಬೆಳವಣಿಗೆ ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಅಧಿಕಾರಿಗಳು ನೀಡುತ್ತಿರುವ ಸಹಕಾರವನ್ನು ಸ್ಮರಿಸಿದರು.
ಅಸೋಸಿಯೇಷನ್‌ನ ಉಪಾಧ್ಯಕ್ಷ ನವೀನ್ ಅಂಬೆಕಲ್ಲು ಮಾತನಾಡಿ, ಕೊಡಗಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೋಂಸ್ಟೇಗಳು ನೀಡುತ್ತಿರುವ ಕೊಡುಗೆ ಹಾಗೂ ಅಸೋಸಿಯೇಷನ್‌ನ ಜವಾಬ್ದಾರಿಗಳ ಕುರಿತು ವಿವರಿಸಿದರು.
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಶಶಿಧರ್ ಮಾತನಾಡಿ, ಹೋಂಸ್ಟೇಗಳ ನೋಂದಣಿ ಪ್ರಕ್ರಿಯೆ ಸರಳವಾಗಿದ್ದು, ಪ್ರತಿಯೊಬ್ಬರೂ ನೋಂದಣಿ ಮಾಡಿಸಿಕೊಂಡು ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು. ಕೊಡಗಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿರುವ ಹೋಂಸ್ಟೇಗಳ ಬೆಳವಣಿಗೆಗೆ ಪ್ರವಾಸೋದ್ಯಮ ಇಲಾಖೆ ಬದ್ಧವಾಗಿದ್ದು, ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಆರ್ಥಿಕ ಸೌಲಭ್ಯಗಳ ಮಾಹಿತಿ
ಹೋಂಸ್ಟೇಗಳ ಅಭಿವೃದ್ಧಿ ಹಾಗೂ ಮಾಲೀಕರಿಗೆ ದೊರೆಯುವ ಆರ್ಥಿಕ ಸೌಲಭ್ಯಗಳ ಕುರಿತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧಿಕಾರಿಗಳು ಮಾಹಿತಿ ನೀಡಿದರು. ಹೋಂಸ್ಟೇಗಳಿಗೆ ಸಾಲ ಸೌಲಭ್ಯ ಪಡೆಯುವ ವಿಧಾನ ಹಾಗೂ ಬ್ಯಾಂಕ್‌ಗಳ ವಿವಿಧ ಯೋಜನೆಗಳ ಕುರಿತು ವಿವರಿಸಿದರು.
ಕೇಂದ್ರ ಸರ್ಕಾರದ ಸೂರ್ಯಘರ್ ಯೋಜನೆಯಡಿ ಮನೆಗಳಿಗೆ ಸೌರ ಫಲಕಗಳನ್ನು ಅಳವಡಿಸುವುದು, ಸೌರಶಕ್ತಿ ಯೋಜನೆಗಳು ಹಾಗೂ ಲಭ್ಯವಿರುವ ಸಬ್ಸಿಡಿ ಸೌಲಭ್ಯಗಳ ಬಗ್ಗೆಯೂ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.
ನೂತನ ಅಧ್ಯಕ್ಷರಾಗಿ ಮೀನಾ ಕಾರ್ಯಪ್ಪ ಆಯ್ಕೆ
ಸಭೆಯಲ್ಲಿ ಕೂರ್ಗ್ ಹೋಂಸ್ಟೇಸ್ ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾಗಿ ಮೀನಾ ಕಾರ್ಯಪ್ಪ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನವೀನ್ ಅಂಬೆಕಲ್ಲು ಪುನರಾಯ್ಕೆಯಾದರೆ, ಕಾರ್ಯದರ್ಶಿಯಾಗಿ ಮದನ್ ಸೋಮಣ್ಣ ಹಾಗೂ ಕೋಶಾಧಿಕಾರಿಯಾಗಿ ಹೇಮ್ ಮಾದಪ್ಪ ನೇಮಕಗೊಂಡರು.
ನಿಕಟಪೂರ್ವ ಅಧ್ಯಕ್ಷೆ ಮೋಂತಿ ಗಣೇಶ್ ಅವರ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಲಾಯಿತು.
ಸಭೆಯ ಬಳಿಕ ಅಸೋಸಿಯೇಷನ್‌ನ ಸದಸ್ಯರು ಕೊಡಗಿನ ಪ್ರವಾಸೋದ್ಯಮದ ಬೆಳವಣಿಗೆ ಹಾಗೂ ಮೂಲಸೌಕರ್ಯಗಳ ಕುರಿತು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.

















