ವಿರಾಜಪೇಟೆ ಅ.30 NEWS DESK : ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುದೀರ್ಘ ವರ್ಷಗಳ ಕಾಲ ಅಂಗನವಾಡಿ ಶಿಕ್ಷಕಿಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಇಬ್ಬರು ಹಿರಿಯ ಶಿಕ್ಷಕಿಯರಿಗೆ ಗ್ರಾಮ ಪಂಚಾಯಿತಿ ವತಿಯಿಂದ ಪಂಚಾಯಿತಿ ಸಭಾಂಗಣದಲ್ಲಿ ಆತ್ಮೀಯ ಬೀಳ್ಕೊಡುಗೆ ನೀಡಲಾಯಿತು. ಕೊಟ್ಟೋಳಿ ಗ್ರಾಮದ ಅಂಗನವಾಡಿಯಲ್ಲಿ ಸುಮಾರು 36 ವರ್ಷಗಳ ಕಾಲ ಶ್ಲಾಘನೀಯ ಸೇವೆ ಸಲ್ಲಿಸಿ ಕಳೆದ ಜೂನ್ ತಿಂಗಳಲ್ಲಿ ನಿವೃತ್ತರಾದ ಕುಮಾರಿ ಸಿ.ಪಿ. ತಾರಾಮಣಿ ಹಾಗೂ ತೋಮರ ಅಂಗನವಾಡಿಯಲ್ಲಿ 26 ವರ್ಷಗಳ ಕಾಲ ಸೇವೆ ಸಲ್ಲಿಸಿ 2024ರಲ್ಲಿ ನಿವೃತ್ತರಾದ ಬಿ.ಯು. ವಸಂತಿ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ ಸನ್ಮಾನಿಸಲಾಯಿತು. ಕಾರಣಾಂತರಗಳಿಂದ ನಿವೃತ್ತಿಯ ಸಂದರ್ಭದಲ್ಲಿ ಇಬ್ಬರು ಶಿಕ್ಷಕಿಯರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ಇಬ್ಬರ ಸೇವೆಯನ್ನು ಸ್ಮರಿಸಿ ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ನಿಕಟಪೂರ್ವ ಚುನಾಯಿತ ಪ್ರತಿನಿಧಿಗಳು, ಮುಖಂಡರು ಹಾಗೂ ಅಧಿಕಾರಿಗಳು ಭಾಗವಹಿಸಿ ನಿವೃತ್ತ ಶಿಕ್ಷಕಿಯರ ಸೇವೆಯನ್ನು ಸ್ಮರಿಸಿದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂ.ಕೆ. ಉತ್ತಪ್ಪ, ನಡಿಕೇರಿಯಂಡ ಶೀಲಾ ಮೇದಪ್ಪ, ಸದಸ್ಯರಾದ ಇಸ್ಮಾಯಿಲ್, ಪ್ರಶಾಂತ್ ಉತ್ತಪ್ಪ ಹಾಗೂ ಸಾಬಾ ಮುತ್ತಪ್ಪ ಉಪಸ್ಥಿತರಿದ್ದು ನಿವೃತ್ತ ಶಿಕ್ಷಕಿಯರಿಗೆ ಶುಭ ಹಾರೈಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಮಣಿ ಅವರು ಮಾತನಾಡಿ, ಅಂಗನವಾಡಿ ಶಿಕ್ಷಕಿಯರ ಸುದೀರ್ಘ ಸೇವೆಯನ್ನು ಶ್ಲಾಘಿಸಿದರು. ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಪಂಚಾಯಿತಿ ಸಿಬ್ಬಂದಿ ವರ್ಗ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದು, ನಿವೃತ್ತ ಶಿಕ್ಷಕಿಯರಿಗೆ ಉತ್ತಮ ಆರೋಗ್ಯ, ಸುಖ-ಶಾಂತಿ ಹಾಗೂ ನೆಮ್ಮದಿಯ ಜೀವನ ಲಭಿಸಲಿ ಎಂದು ಶುಭ ಹಾರೈಸಿದರು.


















