ನಾಪೋಕ್ಲು, NEWS DESK ನ.2: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪರಿಸರ ಸಂರಕ್ಷಣೆ ಹಾಗೂ ಪಕ್ಷಿಗಳ ಉಳಿವಿನ ಉದ್ದೇಶದಿಂದ ‘ಸೇವ್ ಬರ್ಡ್ಸ್, ಸೇವ್ ಟ್ರೀ’ ಪರಿಕಲ್ಪನೆಯಡಿ ಸ್ಥಳೀಯ ನಿವಾಸಿಗಳಾದ ಅನೀಶ್ ಮತ್ತು ವಿಕಾಸ್ ಗಣಪತಿ ಅವರು ನಾಪೋಕ್ಲುವಿನ ರಸ್ತೆ ಬದಿಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಅರ್ಥಪೂರ್ಣವಾಗಿ ರಾಜ್ಯೋತ್ಸವವನ್ನು ಆಚರಿಸಿದರು.
ಪಕ್ಷಿಗಳಿಗೆ ಆಶ್ರಯ ಮತ್ತು ಆಹಾರ ಒದಗಿಸುವುದರ ಜೊತೆಗೆ ಪರಿಸರದ ಸಮತೋಲನವನ್ನು ಕಾಪಾಡುವಲ್ಲಿ ಮರಗಳು ಪ್ರಮುಖ ಪಾತ್ರ ವಹಿಸುತ್ತವೆ. ಈ ಹಿನ್ನೆಲೆಯಲ್ಲಿ ಹಸಿರು ಪರಿಸರವನ್ನು ಬೆಳೆಸುವ ಹಾಗೂ ಪಕ್ಷಿಗಳ ಸಂರಕ್ಷಣೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
‘ಮರಗಳನ್ನು ಬೆಳೆಸಿ, ಪಕ್ಷಿಗಳನ್ನು ಉಳಿಸಿ; ಹಸಿರು ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸಿ’ ಎಂಬ ಸಂದೇಶದೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸಲಾಯಿತು.
ವರದಿ: ದುಗ್ಗಳ ಸದಾನಂದ

















