ನಾಪೋಕ್ಲು, NEWS DESK ನ.2: ಮೈಸೂರಿನ ಪ್ರತಿಷ್ಠಿತ ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯವು ಮಡಿಕೇರಿಯಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ರಾಜ್ಯಮಟ್ಟದ ಪರೀಕ್ಷೆಯಲ್ಲಿ ಸಂಪಾಜೆ ಗ್ರಾಮದ ಕಲ್ಲುಗುಂಡಿಯ ಕು. ಖುಷಿ ಅವರು ಅತ್ಯುತ್ತಮ ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಇವರು ಕಲ್ಲುಗುಂಡಿಯ ‘ನಟರಾಜ ನೃತ್ಯ ನಿಕೇತನ (ರಿ.)’ ಶಾಖೆಯಲ್ಲಿ ವಿದುಷಿ ಇಂದುಮತಿ ನಾಗೇಶ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾರೆ. ಭರತನಾಟ್ಯದ ಜೊತೆಗೆ ಯಕ್ಷಗಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಪ್ರಸ್ತುತ ಇವರು ಕಲ್ಲುಗುಂಡಿಯ ಸವೇರಪುರ ಆಂಗ್ಲ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಕಲ್ಲುಗುಂಡಿಯ ಕೇಶವ ಬಂಗ್ಲೆಗುಡ್ಡೆ ಹಾಗೂ ಕುಸುಮಾ ಕೇಶವ ದಂಪತಿಯ ಪುತ್ರಿಯಾಗಿರುವ ಖುಷಿ ಅವರ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಶಿಕ್ಷಕ ವೃಂದ, ನೃತ್ಯ ಗುರುಗಳು ಹಾಗೂ ಬಂಧು-ಮಿತ್ರರು ಅಭಿನಂದನೆ ಸಲ್ಲಿಸಿದ್ದಾರೆ.
ವರದಿ: ದುಗ್ಗಳ ಸದಾನಂದ

















