ಮಡಿಕೇರಿ, NEWS DESK ನ.2: ಸೋಲಿನ ಭೀತಿಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷವು ಹುದಿಕೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ನಿಗದಿಯಾಗಿರುವ ಸಾಮಾನ್ಯ ವರ್ಗದ ಮೀಸಲಾತಿಯನ್ನು ಬೇರೆ ವರ್ಗಕ್ಕೆ ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ವಿರಾಜಪೇಟೆ ಬಿಜೆಪಿ ಮಂಡಲದ ವಕ್ತಾರ ಚೆಪ್ಪುಡಿರ ರಾಕೇಶ್ ದೇವಯ್ಯ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹುದಿಕೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮೀಸಲಾತಿಯನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಾಸಕರ ಸ್ವಕ್ಷೇತ್ರದಲ್ಲೇ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಇಂತಹ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಹೇಳಿದ್ದಾರೆ.
ಸೋಲಿನ ಭೀತಿಯಿಂದ ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಚುನಾವಣೆಯನ್ನೇ ಎದುರಿಸಲು ಕಾಂಗ್ರೆಸ್ ಪಕ್ಷ ಈ ರೀತಿಯ ಬದಲಾವಣೆಗಳಿಗೆ ಮುಂದಾಗುತ್ತಿರುವುದನ್ನು ಗಮನಿಸಿದರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರಿಸ್ಥಿತಿ ಏನಾಗಬಹುದು ಎಂಬ ಪ್ರಶ್ನೆ ಮೂಡುತ್ತದೆ. ಈಗಾಗಲೇ ಶಾಸಕರ ತವರು ಕ್ಷೇತ್ರದಲ್ಲಿ ನಡೆದ ಸಂಘ-ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಿದ್ದು, ಆ ಹಿನ್ನಡೆಯಿಂದ ಇನ್ನೂ ಚೇತರಿಸಿಕೊಂಡಿಲ್ಲ. ಇದೀಗ ಹುದಿಕೇರಿ ಜಿ.ಪಂ. ಕ್ಷೇತ್ರದ ಸಾಮಾನ್ಯ ವರ್ಗದ ಮೀಸಲಾತಿಯಿಂದಲೂ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಬಹುದು ಎಂಬ ಆತಂಕದಿಂದ ಮೀಸಲಾತಿ ಬದಲಾವಣೆಗೆ ಪ್ರಯತ್ನಿಸುತ್ತಿರುವಂತೆ ಕಾಣುತ್ತಿದೆ ಎಂದು ಟೀಕಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ಜನರು ಬೇಸರಗೊಂಡಿದ್ದಾರೆ. ಭಾಗ್ಯಗಳ ಹೆಸರಿನಲ್ಲಿ ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಸರ್ಕಾರ, ಮತದಾರರಿಗೆ ನೀಡಿದ ಎಲ್ಲಾ ಭರವಸೆಗಳನ್ನು ಸಮರ್ಪಕವಾಗಿ ಈಡೇರಿಸುತ್ತಿಲ್ಲ. ಅಭಿವೃದ್ಧಿ ಕಾರ್ಯಗಳು ನಿಂತ ನೀರಾಗಿದೆ. ಮತ್ತೊಂದೆಡೆ, ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ತೊಂದರೆ ಅನುಭವಿಸುವಂತಾಗಿದೆ. ಕಾಂಗ್ರೆಸ್ ಸರ್ಕಾರವನ್ನು ಯಾಕೆ ಆಯ್ಕೆ ಮಾಡಿದ್ದೇವೆಯೋ ಎಂಬ ಅಸಮಾಧಾನ ಜನರಲ್ಲಿ ಮೂಡಿದೆ ಎಂದು ತಿಳಿಸಿದ್ದಾರೆ.
ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮತದಾರರು ತಮ್ಮ ಅಸಮಾಧಾನವನ್ನು ಮತದಾನದ ಮೂಲಕ ವ್ಯಕ್ತಪಡಿಸಲಿದ್ದಾರೆ. ಮೀಸಲಾತಿಯಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿದರೂ ಕಾಂಗ್ರೆಸ್ ಪಕ್ಷಕ್ಕೆ ಸೋಲು ಖಚಿತ ಎಂದು ರಾಕೇಶ್ ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.

















