ಮಡಿಕೇರಿ, NEWS DESK ನ.3: ರಾಷ್ಟ್ರ ಸೇವಿಕಾ ಸಮಿತಿಯು 1936ರಲ್ಲಿ ಸ್ಥಾಪನೆಯಾಗಿದ್ದು, ಮುಂಬರುವ ಶತಮಾನೋತ್ಸವದ ಹಿನ್ನೆಲೆಯಲ್ಲಿ ಮುಂದಿನ 10 ವರ್ಷಗಳ ವಿಶೇಷ ಕಾರ್ಯಯೋಜನೆಯನ್ನು ರೂಪಿಸುವ ಉದ್ದೇಶದಿಂದ ಮಡಿಕೇರಿಯಲ್ಲಿ ಸಮಿತಿಯ ಪ್ರಮುಖ ಬೈಠಕ್ ಯಶಸ್ವಿಯಾಗಿ ನಡೆಯಿತು.
ಸಭೆಯಲ್ಲಿ ಮಂಗಳೂರು ವಿಭಾಗದ ರಾಷ್ಟ್ರ ಸೇವಿಕಾ ಸಮಿತಿಯ ಕಾರ್ಯವಾಹಿಕೆ ಗಿರಿಜಕ್ಕ ಅವರು ಉಪಸ್ಥಿತರಿದ್ದು, ಕಾರ್ಯಕರ್ತೆಯರೊಂದಿಗೆ ಮುಕ್ತ ಸಂವಾದ ನಡೆಸಿದರು. ಸಮಿತಿಯ ಶತಮಾನೋತ್ಸವದತ್ತ ಸಂಘಟನೆಯನ್ನು ಮತ್ತಷ್ಟು ಸಕ್ರಿಯವಾಗಿ ಮುನ್ನಡೆಸುವ ನಿಟ್ಟಿನಲ್ಲಿ ಮುಂದಿನ ಕಾರ್ಯಯೋಜನೆಗಳ ಕುರಿತು ವಿಸ್ತೃತ ಚರ್ಚೆ ನಡೆಸಲಾಯಿತು.
ಇದೇ ಸಂದರ್ಭದಲ್ಲಿ ಮಡಿಕೇರಿ ನಗರದಲ್ಲಿ ಈ ಹಿಂದೆ ನಡೆಯುತ್ತಿದ್ದ ರಾಷ್ಟ್ರ ಸೇವಿಕಾ ಸಮಿತಿಯ ಶಾಖೆಯನ್ನು ಹೊಸ ಹುರುಪಿನೊಂದಿಗೆ ಪುನರಾರಂಭಿಸಲಾಯಿತು. ಇನ್ನು ಮುಂದೆ ಶಾಖೆಯು ಮಡಿಕೇರಿ ನಗರದಲ್ಲಿ ನಿರಂತರವಾಗಿ ನಡೆಯಲಿದ್ದು, ಸಂಘಟನೆಯನ್ನು ಬಲಪಡಿಸಿ ಬೆಳೆಸುವ ಜವಾಬ್ದಾರಿ ಎಲ್ಲ ಕಾರ್ಯಕರ್ತೆಯರ ಮೇಲಿದೆ ಎಂದು ತಿಳಿಸಲಾಯಿತು.
ಮಹಿಳೆಯರು ಹಾಗೂ ಯುವತಿಯರಲ್ಲಿ ರಾಷ್ಟ್ರಭಕ್ತಿ, ಕೌಶಲ್ಯ ಮತ್ತು ಸಂಸ್ಕಾರಗಳನ್ನು ಬೆಳೆಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.
ಬೈಠಕ್ನಲ್ಲಿ ಮಡಿಕೇರಿಯ ಪ್ರಮುಖ ಸೇವಿಕೆಯರು ಹಾಗೂ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

















