ಕುಶಾಲನಗರ, NEWS DESK ನ.3: ಬದುಕಿಗಾಗಿ ಶಿಕ್ಷಣ ಪಡೆಯುವುದರ ಜೊತೆಗೆ ಮಾನವೀಯ ಮೌಲ್ಯಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡಾಗ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ಹಾಗೂ ಸಮಾಜ ಚಿಂತಕ ಉ.ರಾ. ನಾಗೇಶ್ ಹೇಳಿದರು.
ಕುಶಾಲನಗರದ ಫಾತಿಮಾ ಕಾನ್ವೆಂಟ್ ಶಾಲೆಯ ಸುವರ್ಣ ವರ್ಷಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳ ಭಾಗವಾಗಿ ಮಂಗಳವಾರ ಕನ್ನಡ ರಾಜ್ಯೋತ್ಸವ ಆಚರಣೆ ಹಾಗೂ ಸ್ವಚ್ಛತಾ ಸೇನಾನಿಗಳಾದ 13 ಮಂದಿ ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಉ.ರಾ. ನಾಗೇಶ್, ಪ್ರತಿಯೊಬ್ಬರಿಗೂ ಉತ್ತಮ ಶಿಕ್ಷಣ ಅತ್ಯವಶ್ಯಕ. ಉತ್ತಮ ಶಿಕ್ಷಣದಿಂದ ಮನಸ್ಸು ಶುದ್ಧವಾಗುತ್ತದೆ. ಮನಸ್ಸು ಶುದ್ಧವಾದಾಗ ನಾವು ಮಾಡುವ ಪ್ರತಿಯೊಂದು ಕೆಲಸವೂ ಅರ್ಥಪೂರ್ಣವಾಗುತ್ತದೆ. ಸ್ವಚ್ಛ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸುವುದರ ಜೊತೆಗೆ ಸಮಾಜದ ಸ್ವಚ್ಛತೆಗಾಗಿ ಶ್ರಮಿಸುವ ಪೌರಕಾರ್ಮಿಕರನ್ನು ಗೌರವಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕುಶಾಲನಗರ ಪುರಸಭೆಯ ಆರೋಗ್ಯಾಧಿಕಾರಿ ಉದಯ್ ಕುಮಾರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್. ನಾಗೇಶ್, ಶಾಲಾ ಆಡಳಿತ ಮಂಡಳಿಯ ಸಿಸ್ಟರ್ ಆಗ್ನೆಸ್, ವ್ಯವಸ್ಥಾಪಕಿ ಸಿಸ್ಟರ್ ಪ್ಲೋರೆಟ್, ಸಂಪರ್ಕಾಧಿಕಾರಿ ಸಿಸ್ಟರ್ ಅರ್ಪಿತಾ, ಸಿಸ್ಟರ್ ಸೋಫಿಯಾ, ಶಾಲೆಯ ಸಲಹಾ ಸಮಿತಿಯ ಡಾ. ರಾಮ್ ಭಟ್, ಶಾರಿಕ್, ವೈಶಾಲಿ, ಸಂಚಾರಿ ಠಾಣಾಧಿಕಾರಿ ಗೀತಾ, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

















