ಕುಶಾಲನಗರ, NEWS DESK ನ.3: ಮಕ್ಕಳಲ್ಲಿ ಬಾಲ್ಯದಿಂದಲೇ ಸ್ವಚ್ಛತೆಯ ಅರಿವು ಮತ್ತು ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದು ಕುಶಾಲನಗರ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಸೀತಾಲಕ್ಷ್ಮಿ ತಿಳಿಸಿದರು.
ಕುಶಾಲನಗರ ಸರ್ಕಾರಿ ಬಾಲಕಿಯರ ಪ್ರೌಢಶಾಲೆಗೆ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಕಸ ಸಂಗ್ರಹಿಸಿ ಶೇಖರಿಸಲು ಅನುಕೂಲವಾಗುವ ಬಾಟಲ್ ಆಕಾರದ ಕಸದ ಬುಟ್ಟಿಯನ್ನು ಕೊಡುಗೆಯಾಗಿ ನೀಡಿದ ಬಳಿಕ ಅವರು ಮಾತನಾಡಿದರು.
ಶಾಲೆಯ ಆವರಣ ಸೇರಿದಂತೆ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಉತ್ತಮ ಪರಿಸರವನ್ನು ಕಾಪಾಡಿಕೊಳ್ಳಬಹುದು. ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳು ಹಾಗೂ ಕಸವನ್ನು ನಿಗದಿತ ಸ್ಥಳದಲ್ಲಿ ವಿಲೇವಾರಿ ಮಾಡುವ ಜವಾಬ್ದಾರಿಯ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು ಮುಖ್ಯ ಎಂದು ಹೇಳಿದರು.
ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದದವರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

















