ಮಡಿಕೇರಿ NEWS DESK ನ.3 : ಐತಿಹಾಸಿಕ ಹಿನ್ನೆಲೆ ಹಾಗೂ ನೂರಾರು ವರ್ಷಗಳ ಪರಂಪರೆಯನ್ನು ಹೊಂದಿರುವ ಮಡಿಕೇರಿ ದಸರಾ ನಾಡಹಬ್ಬಕ್ಕೆ ಕಳೆದ ನಾಲ್ಕು ವರ್ಷಗಳಲ್ಲಿ ಹೊಸ ವೈಭವ ಮತ್ತು ಜನೋತ್ಸವದ ಮೆರುಗು ತಂದುಕೊಡುವಲ್ಲಿ ಮಡಿಕೇರಿ ಕ್ಷೇತ್ರದ ಜನಪ್ರಿಯ ಶಾಸಕ ಡಾ. ಮಂತರ್ ಗೌಡ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಮಡಿಕೇರಿ ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ತಿಳಿಸಿದ್ದಾರೆ. ಮಡಿಕೇರಿ ದಸರಾಕ್ಕೆ ಶತಮಾನಗಳ ಇತಿಹಾಸವಿದ್ದರೂ, ಇತ್ತೀಚಿನ ನಾಲ್ಕು ವರ್ಷಗಳಲ್ಲಿ ದಸರಾ ಜನೋತ್ಸವದ ಯಶಸ್ಸು, ಕಾರ್ಯಕ್ರಮಗಳ ವೈವಿಧ್ಯತೆ ಹಾಗೂ ಅದ್ಧೂರಿ ಆಚರಣೆಯ ಹಿಂದೆ ಶಾಸಕರ ವಿಶೇಷ ಆಸಕ್ತಿ, ಇಚ್ಛಾಶಕ್ತಿ ಮತ್ತು ನಿರಂತರ ಪ್ರಯತ್ನವಿದೆ. ದಸರಾವನ್ನು ಕೇವಲ ಸಾಂಪ್ರದಾಯಿಕ ಆಚರಣೆಗೆ ಸೀಮಿತಗೊಳಿಸದೆ, ಎಲ್ಲ ವರ್ಗದ ಜನರನ್ನು ಒಳಗೊಂಡ ಜನೋತ್ಸವವನ್ನಾಗಿ ರೂಪಿಸುವಲ್ಲಿ ಡಾ. ಮಂತರ್ ಗೌಡ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ದಸರಾ ಆಚರಣೆಯ ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಶಾಸಕರು ವಹಿಸಿರುವ ಕಾಳಜಿ ಗಮನಾರ್ಹವಾಗಿದೆ. ದಸರಾ ಆಚರಣೆಗೆ ಅಗತ್ಯವಿರುವ ಅನುದಾನ ಹಾಗೂ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವಲ್ಲಿ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಗೌರಿ-ಗಣೇಶೋತ್ಸವ ಮತ್ತು ಮಡಿಕೇರಿ ದಸರಾ ಹಬ್ಬಗಳ ಯಶಸ್ವಿ ಆಚರಣೆಗಾಗಿ ಪ್ರತಿವರ್ಷ ತಮ್ಮ ವೈಯಕ್ತಿಕ ದೇಣಿಗೆಯ ರೂಪದಲ್ಲಿಯೂ ಸುಮಾರು ಎರಡು ಕೋಟಿ ರೂ.ಗಳಷ್ಟು ಮೊತ್ತವನ್ನು ವಿನಿಯೋಗಿಸುತ್ತಾರೆ ಎಂಬುದು ಅವರ ಕೊಡುಗೆಯ ಮಹತ್ವವನ್ನು ತೋರಿಸುತ್ತದೆ ಎಂದು ಪ್ರಕಾಶ್ ಆಚಾರ್ಯ ತಿಳಿಸಿದ್ದಾರೆ. ದಸರಾ ಜನೋತ್ಸವದಲ್ಲಿ ಜನರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಶಾಸಕರು ವಿಶೇಷ ಆಸಕ್ತಿ ತೋರಿದ್ದಾರೆ. ಸುಪ್ರಸಿದ್ಧ ಗಾಯಕರನ್ನು ಆಹ್ವಾನಿಸಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸುವುದರ ಜೊತೆಗೆ ಕಾಫಿ ದಸರಾ, ಕ್ರೀಡಾ ದಸರಾ, ಯುವ ದಸರಾ, ಮಕ್ಕಳ ದಸರಾ, ಮಹಿಳಾ ದಸರಾ, ಕವಿಗೋಷ್ಠಿ, ಜನಪದ ದಸರಾ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಈ ಕಾರ್ಯಕ್ರಮಗಳ ಮೂಲಕ ಯುವಜನತೆ, ಮಕ್ಕಳು, ಮಹಿಳೆಯರು, ಕ್ರೀಡಾಪಟುಗಳು, ಸಾಹಿತಿಗಳು, ಕಲಾವಿದರು ಹಾಗೂ ಜನಪದ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆ ಕಲ್ಪಿಸಲಾಗಿದೆ. ದಸರಾ ಎಂದರೆ ಕೇವಲ ಮಂಟಪಗಳ ಮೆರವಣಿಗೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಷ್ಟೇ ಅಲ್ಲ, ಪ್ರತಿಯೊಬ್ಬರನ್ನೂ ಒಳಗೊಳ್ಳುವ ಸಂಭ್ರಮದ ಹಬ್ಬ ಎಂಬ ಪರಿಕಲ್ಪನೆಗೆ ಶಾಸಕರು ಹೆಚ್ಚಿನ ಒತ್ತು ನೀಡಿದ್ದಾರೆ. ಜನಮೆಚ್ಚುಗೆ ಗಳಿಸುವ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಅವರು ವೈಯಕ್ತಿಕವಾಗಿ ಆಸಕ್ತಿ ವಹಿಸಿರುವುದು ದಸರಾ ಜನೋತ್ಸವದ ಯಶಸ್ಸಿಗೆ ಮತ್ತಷ್ಟು ಬಲ ನೀಡಿದೆ. ಈ ಬಾರಿಯ ಮಡಿಕೇರಿ ದಸರಾ ಜನೋತ್ಸವಕ್ಕೆ ಎರಡು ಕೋಟಿ ರೂ.ಗಳ ಅನುದಾನವನ್ನು ತರಲು ಶಾಸಕ ಡಾ. ಮಂತರ್ ಗೌಡ ಅವರು ಶ್ರಮಿಸಿದ್ದಾರೆ. ದಸರಾ ಆಚರಣೆಯ ಪ್ರಮುಖ ಆಕರ್ಷಣೆಗಳಾದ ಹತ್ತು ಶಕ್ತಿ ದೇವತೆಗಳ ದಶಮಂಟಪಗಳು ಹಾಗೂ ನಾಲ್ಕು ಶಕ್ತಿ ದೇವತೆಗಳ ಕರಗಗಳಿಗೆ ಅವರ ಅವಧಿಯಲ್ಲಿ ಅತಿ ಹೆಚ್ಚು ಅನುದಾನ ಹಂಚಿಕೆಯಾಗಿದೆ ಎಂಬುದು ವಿಶೇಷವಾಗಿದೆ. ದಸರಾ ಸಮಿತಿಗಳು, ಮಂಟಪ ಸಮಿತಿಗಳು ಹಾಗೂ ವಿವಿಧ ಉಪಸಮಿತಿಗಳ ಕಾರ್ಯಚಟುವಟಿಕೆಗಳಿಗೆ ಅಗತ್ಯ ಸಹಕಾರ ನೀಡುವ ಮೂಲಕ ದಸರಾ ಆಚರಣೆಯನ್ನು ಯಶಸ್ವಿಗೊಳಿಸುವಲ್ಲಿ ಶಾಸಕರು ಪ್ರಮುಖ ಪಾತ್ರ ವಹಿಸಿದ್ದಾರೆ. ದಸರಾ ಉತ್ಸವದ ಪರಂಪರೆಯನ್ನು ಉಳಿಸುವುದರ ಜೊತೆಗೆ ಆಧುನಿಕ ಕಾರ್ಯಕ್ರಮಗಳ ಮೂಲಕ ಹೊಸ ತಲೆಮಾರಿನ ಜನರನ್ನೂ ಹಬ್ಬದೊಂದಿಗೆ ಬೆಸೆಯುವ ಪ್ರಯತ್ನ ಮಾಡಿದ್ದಾರೆ. ಮಡಿಕೇರಿ ದಸರಾ ನಾಡಹಬ್ಬದ ಇತಿಹಾಸ, ಧಾರ್ಮಿಕ ಪರಂಪರೆ ಮತ್ತು ಸಾಂಸ್ಕೃತಿಕ ವೈಭವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಪ್ರಯತ್ನಗಳು ಮಹತ್ವದ್ದಾಗಿವೆ. ಕಳೆದ ನಾಲ್ಕು ವರ್ಷಗಳ ದಸರಾ ಜನೋತ್ಸವದ ಯಶಸ್ಸಿಗೆ ಶಾಸಕ ಡಾ. ಮಂತರ್ ಗೌಡ ಅವರ ಇಚ್ಛಾಶಕ್ತಿ, ಆರ್ಥಿಕ ಸಹಕಾರ ಮತ್ತು ವೈಯಕ್ತಿಕ ಆಸಕ್ತಿಯೇ ಪ್ರಮುಖ ಕಾರಣವಾಗಿದೆ ಎಂದು ಮಡಿಕೇರಿ ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ತಿಳಿಸಿದ್ದಾರೆ.

















