ಸುಂಟಿಕೊಪ್ಪ, NEWS DESK ನ.5: ಸುಂಟಿಕೊಪ್ಪ ಸಮೀಪದ ಪನ್ಯ ತೋಟದಲ್ಲಿ ಹುಲಿ ಅಥವಾ ಚಿರತೆಯನ್ನು ಹೋಲುವ ಕಾಡುಪ್ರಾಣಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಸಾರ್ವಜನಿಕರು ಹಾಗೂ ತೋಟದ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ.
ಬುಧವಾರ ತೋಟದ ಕಾರ್ಮಿಕರು ಹೆಜ್ಜೆ ಗುರುತುಗಳನ್ನು ಗಮನಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಅರಣ್ಯ ಇಲಾಖೆಯ ಮೂಲಗಳ ಪ್ರಕಾರ, ಪನ್ಯ ಸಮೀಪದ ಕಸ ವಿಲೇವಾರಿ ಘಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಾಯಿಗಳ ಹಾವಳಿ ಕಂಡುಬರುತ್ತಿದೆ. ಅವುಗಳನ್ನು ಬೇಟೆಯಾಡಲು ಚಿರತೆಗಳು ಆ ಪ್ರದೇಶಕ್ಕೆ ಬರುತ್ತಿರುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
ಆದರೆ, ಪತ್ತೆಯಾಗಿರುವ ಹೆಜ್ಜೆ ಗುರುತುಗಳು ಹುಲಿಯದ್ದೇ ಅಥವಾ ಚಿರತೆಯದ್ದೇ ಎಂಬುದು ಇನ್ನೂ ಖಚಿತವಾಗಿಲ್ಲ. ಯಾವುದೇ ಕಾಡುಪ್ರಾಣಿ ಆ ಪ್ರದೇಶದಲ್ಲಿ ಸಂಚರಿಸಿರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೆ ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಮೂಲಗಳು ಸೂಚಿಸಿವೆ.
ಈ ನಡುವೆ ಸಾರ್ವಜನಿಕರು ಹಾಗೂ ಕೂಲಿ ಕಾರ್ಮಿಕರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಹೆಜ್ಜೆ ಗುರುತುಗಳನ್ನು ಪರಿಶೀಲಿಸಬೇಕು. ಕಾಡುಪ್ರಾಣಿಯ ಸಂಚಾರದ ಬಗ್ಗೆ ಸ್ಪಷ್ಟ ಮಾಹಿತಿ ನೀಡುವುದರ ಜೊತೆಗೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸಾರ್ವಜನಿಕರ ಸುರಕ್ಷತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಕಸ ವಿಲೇವಾರಿ ಘಟಕಕ್ಕೆ ನಾಯಿಗಳನ್ನು ಬೇಟೆಯಾಡಲು ಚಿರತೆಗಳು ಬರುತ್ತಿರುವುದು ನಿಜವಾದಲ್ಲಿ, ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳೀಯ ಗ್ರಾಮ ಪಂಚಾಯಿತಿಯೊಂದಿಗೆ ಸಮನ್ವಯ ಸಾಧಿಸಿ, ಘಟಕದಲ್ಲಿನ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

















