ಸುಂಟಿಕೊಪ್ಪ, NEWS DESK ನ. 5: ಕಳೆದ ಐದು ದಶಕಗಳಿಂದ ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡು ಉತ್ತಮ ಇಳುವರಿ ಪಡೆಯುತ್ತಿದ್ದ ಅನುಭವಿ ಕೃಷಿಕ ಪಟ್ಟೆಮನೆ ಉದಯಕುಮಾರ್ ಅವರಿಗೆ ಈ ಬಾರಿ ಭತ್ತದ ಫಸಲು ತೀವ್ರ ನಿರಾಸೆ ಮೂಡಿಸಿದೆ.
ಪ್ರತಿವರ್ಷದಂತೆ ಈ ಬಾರಿಯೂ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರದ ಮೂಲಕ ಬೀಜದ ಭತ್ತವನ್ನು ಪಡೆದು ಆರ್ಎನ್ಆರ್ ತಳಿಯ ಭತ್ತವನ್ನು ನಾಟಿ ಮಾಡಿದ್ದರು. ಹವಾಮಾನ ವೈಪರೀತ್ಯ ಹಾಗೂ ಪ್ರತಿಕೂಲ ವಾತಾವರಣದ ನಡುವೆಯೂ ತಮ್ಮ ಕೃಷಿ ಅನುಭವದ ಆಧಾರದ ಮೇಲೆ ಪೈರನ್ನು ಜೋಪಾನವಾಗಿ ಬೆಳೆಸಿ ಪೋಷಣೆ ಮಾಡಿದ್ದರು. ಆದರೆ ಭತ್ತದ ತೆನೆ ಬಿಡುವ ಹಂತದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಾರದಿರುವುದು ಅವರಿಗೆ ಆಘಾತ ಉಂಟುಮಾಡಿದೆ.
ಒಟ್ಟು ಬೆಳೆಯ ಪೈಕಿ ಶೇ.5ರಿಂದ 10ರಷ್ಟು ಮಾತ್ರ ಇಳುವರಿ ದೊರೆಯುವ ಸಾಧ್ಯತೆಯಿದ್ದು, ಭತ್ತದ ಕೃಷಿಯಿಂದ ಈ ಬಾರಿ ಭಾರೀ ನಷ್ಟ ಅನುಭವಿಸುವಂತಾಗಿದೆ ಎಂದು ಉದಯಕುಮಾರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಹಲವು ವರ್ಷಗಳಿಂದ ಕುಶಾಲನಗರ ರೈತ ಸಂಪರ್ಕ ಕೇಂದ್ರದ ಮೂಲಕ ಬೀಜದ ಭತ್ತ ಪಡೆದು ಯಶಸ್ವಿಯಾಗಿ ಕೃಷಿ ಮಾಡುತ್ತಿದ್ದ ಅವರು, ಈ ಬಾರಿ ಸುಂಟಿಕೊಪ್ಪ ರೈತ ಸಂಪರ್ಕ ಕೇಂದ್ರದಿಂದ ಆರ್ಎನ್ಆರ್ ಭತ್ತದ ತಳಿಯನ್ನು ಪಡೆದು ನಾಟಿ ಮಾಡಿದ್ದರು. ಆದರೆ ಈ ತಳಿಯ ಭತ್ತದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆನೆ ಬಿಡದಿರಲು ಕಾರಣವೇನು ಎಂಬುದು ಯಕ್ಷಪ್ರಶ್ನೆಯಾಗಿದೆ.
ಈ ಕುರಿತು ಸಂಬಂಧಪಟ್ಟ ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿರುವ ಉದಯಕುಮಾರ್, ತಮ್ಮ ಗದ್ದೆಗೆ ಭೇಟಿ ನೀಡಿ ಬೆಳೆಯ ಸ್ಥಿತಿಗತಿಯನ್ನು ಪರಿಶೀಲಿಸಿ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಕೃಷಿ ಇಲಾಖೆಯಿಂದ ವಿತರಿಸಲಾದ ಬೀಜದ ಭತ್ತದಿಂದ ಈ ರೀತಿಯ ಸಮಸ್ಯೆ ಉಂಟಾಗಲು ಕಾರಣವೇನು ಎಂಬುದರ ಕುರಿತು ಸಮಗ್ರ ಮಾಹಿತಿ ನೀಡುವಂತೆ ಆಗ್ರಹಿಸಿದ್ದಾರೆ.

















