ಮಡಿಕೇರಿ, NEWS DESK ನ. 11: ಕೊಡವರ ವಿಶಿಷ್ಟ ಜನಾಂಗೀಯ ಗುರುತು, ಪಾರಂಪರಿಕ ಮಾತೃಭೂಮಿ, ಭಾಷೆ, ಸಂಸ್ಕೃತಿ, ಭೂಮಿ ಹಾಗೂ ರಾಜಕೀಯ ಹಕ್ಕುಗಳ ರಕ್ಷಣೆಗಾಗಿ ಸಂವಿಧಾನಾತ್ಮಕ ಪರಿಹಾರ ಒದಗಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (CNC) ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹಿಸಿದರು.
ಕಡಿಯತ್ನಾಡು–ಬೆಪ್ಪುನಾಡು ದ್ವಿಸಂಧಿ ಕಡಂಗದಲ್ಲಿ ಬುಧವಾರ ನಡೆದ 9ನೇ ಕೊಡವ ಜನಜಾಗೃತಿ ಸಾರ್ವಜನಿಕ ಸಂಪರ್ಕ ಮಾನವ ಸರಪಳಿ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೊಡವರ ಸಮಸ್ಯೆಗಳನ್ನು ಸ್ಥೂಲ ಮಟ್ಟದ (Macro-Level) ವಿಶ್ಲೇಷಣೆಯ ಬದಲಾಗಿ ಸೂಕ್ಷ್ಮ ಮಟ್ಟದ (Micro-Level) ವಿಶ್ಲೇಷಣೆಯ ಮೂಲಕ ಪರಿಗಣಿಸಬೇಕು. ಅಲ್ಪಸಂಖ್ಯಾತ, ಸೂಕ್ಷ್ಮ ಹಾಗೂ ಆದಿಮಸಂಜಾತ ಕೊಡವರ ವಿಶಿಷ್ಟ ಜನಾಂಗೀಯ ಹಿನ್ನೆಲೆ, ಇತಿಹಾಸ ಮತ್ತು ಸಂಕಷ್ಟಗಳನ್ನು ಪ್ರತ್ಯೇಕವಾಗಿ ಗುರುತಿಸಿದಾಗ ಮಾತ್ರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನ್ಯಾಯಯುತ ಪರಿಹಾರ ದೊರೆಯಲು ಸಾಧ್ಯ ಎಂದು ಅವರು ಹೇಳಿದರು.
1956ರಲ್ಲಿ ಕೊಡಗು ಸಿ-ವರ್ಗದ ರಾಜ್ಯದ ಸ್ಥಾನಮಾನವನ್ನು ಕಳೆದುಕೊಂಡು ಕರ್ನಾಟಕದಲ್ಲಿ ವಿಲೀನಗೊಂಡಿತು. 1941ರ ನಂತರದ ಜನಗಣತಿಯಲ್ಲಿ ಕೊಡವರ ಪ್ರತ್ಯೇಕ ಜನಾಂಗೀಯ ಗುರುತು ಕಳೆದುಹೋಗಿದೆ. ಇದರಿಂದ ಕೊಡವರು ಜನಗಣತಿಯಲ್ಲಿನ ಗುರುತು, ಪಾರಂಪರಿಕ ಮಾತೃಭೂಮಿ ಹಾಗೂ ವಂಶಪಾರಂಪರಿಕ ಆಸ್ತಿಗಳ ನಷ್ಟ ಸೇರಿದಂತೆ ತ್ರಿವಳಿ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಕೊಡವರು ಜಾತಿ ಅಥವಾ ಧರ್ಮವಲ್ಲ. ಅವರಿಗೆ ಜಾತಿ, ಉಪಜಾತಿ ಹಾಗೂ ಒಳಪಂಗಡಗಳಿಲ್ಲ ಎಂದು ಪ್ರತಿಪಾದಿಸಿದರು.
ಕೊಡವಲ್ಯಾಂಡ್ ಸ್ವಾಯತ್ತತೆಗೆ ಆಗ್ರಹ
ಸಂವಿಧಾನದ 244 ಮತ್ತು 371ನೇ ವಿಧಿಗಳು ಹಾಗೂ ಐದನೇ ಮತ್ತು ಆರನೇ ಅನುಸೂಚಿಗಳ ಆಶಯದಡಿ ಕೊಡವಲ್ಯಾಂಡ್ಗೆ ಭೌಗೋಳಿಕ-ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ಆಡಳಿತದ ವ್ಯವಸ್ಥೆ ಕಲ್ಪಿಸಬೇಕು. ಡಾರ್ಜಿಲಿಂಗ್ ಗೋರ್ಖಾಲ್ಯಾಂಡ್, ಲಡಾಖ್ ಹಾಗೂ ಈಶಾನ್ಯ ಭಾರತದ ಸ್ವಾಯತ್ತ ಮಂಡಳಿಗಳ ಮಾದರಿಯಲ್ಲಿ ಕೊಡವರ ಪಾರಂಪರಿಕ ಮಾತೃಭೂಮಿಗೆ ವಿಶೇಷ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.
ಸಂವಿಧಾನದ 29 ಮತ್ತು 30ನೇ ವಿಧಿಗಳಡಿ ಕೊಡವ ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯನ್ನು ಸಂರಕ್ಷಿಸಬೇಕು. ಕೊಡವ ತಕ್ಕ್ ಭಾಷೆಯನ್ನು ಎಂಟನೇ ಅನುಸೂಚಿಗೆ ಸೇರಿಸಬೇಕು. ಕೊಡವರ ಸಾಂಪ್ರದಾಯಿಕ ಬಂದೂಕು ಅಥವಾ ತೋಕ್ ಸಂಸ್ಕಾರಕ್ಕೆ ಸಂವಿಧಾನದ 25 ಮತ್ತು 26ನೇ ವಿಧಿಗಳಡಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.
2027ರ ಜನಗಣತಿಯಲ್ಲಿ ಪ್ರತ್ಯೇಕ ಗುರುತಿಸುವಿಕೆಗೆ ಒತ್ತಾಯ
2027ರ ರಾಷ್ಟ್ರೀಯ ಜನಗಣತಿ ಹಾಗೂ ಜಾತಿ ಗಣತಿಯಲ್ಲಿ ಕೊಡವರನ್ನು ವಿಶಿಷ್ಟ ಜನಾಂಗೀಯ ಸಮುದಾಯವಾಗಿ ಪ್ರತ್ಯೇಕವಾಗಿ ದಾಖಲಿಸಬೇಕು. ಕೊಡವರ ಆಧ್ಯಾತ್ಮಿಕ ನೆಲೆಗಳಾದ ಮಂದ್, ದೇವಬನ, ಪವಿತ್ರ ತೀರ್ಥಕ್ಷೇತ್ರ ತಲಕಾವೇರಿ ಹಾಗೂ ಇತರ ಕೊಡವ ಸಾಂಸ್ಕೃತಿಕ ತಾಣಗಳಿಗೆ ವಿಶೇಷ ಮಾನ್ಯತೆ ನೀಡಬೇಕು ಎಂದರು.
ಕೊಡವ ಪ್ರದೇಶದಲ್ಲಿ ಭೂ ಪರಿವರ್ತನೆ, ಬೃಹತ್ ರೆಸಾರ್ಟ್ಗಳು, ಟೌನ್ಶಿಪ್ಗಳು ಹಾಗೂ ಲೇಔಟ್ಗಳ ನಿರ್ಮಾಣದಿಂದ ಪರಿಸರ, ಕೃಷಿಭೂಮಿ, ಕಾಫಿ ತೋಟಗಳು ಮತ್ತು ಕಾವೇರಿ ನದಿಯ ಜಲಮೂಲಗಳಿಗೆ ಹಾನಿಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೊಡಗಿನ ನೈಸರ್ಗಿಕ ಸಂಪನ್ಮೂಲಗಳು ಹಾಗೂ ಜೀವವೈವಿಧ್ಯತೆಯನ್ನು ರಕ್ಷಿಸಲು ವಾಣಿಜ್ಯ ಉದ್ದೇಶದ ಭೂ ಪರಿವರ್ತನೆಯನ್ನು ನಿಯಂತ್ರಿಸಬೇಕು ಎಂದು ಒತ್ತಾಯಿಸಿದರು.
ದೇವಟ್ಪರಂಬುವಿನಲ್ಲಿ ನಡೆದ ಕೊಡವ ನರಮೇಧದ ಸ್ಥಳದಲ್ಲಿ ಅಂತರರಾಷ್ಟ್ರೀಯ ಸ್ಮಾರಕ ನಿರ್ಮಾಣ, ಕಾವೇರಿ ನದಿಯ ನೀರಿನ ಹಕ್ಕುಗಳ ರಕ್ಷಣೆ, ಕೊಡವ ಪ್ರದೇಶಕ್ಕೆ ಇನ್ನರ್ ಲೈನ್ ಪರ್ಮಿಟ್ ಮಾದರಿಯ ರಕ್ಷಣೆ ಹಾಗೂ ಪಾರಂಪರಿಕ ಭೂಮಿಯ ಹಕ್ಕುಗಳ ಮರುಸ್ಥಾಪನೆ ಸೇರಿದಂತೆ ಹತ್ತು ಪ್ರಮುಖ ಸಂವಿಧಾನಾತ್ಮಕ ಹಕ್ಕೊತ್ತಾಯಗಳನ್ನು ಮಂಡಿಸಿದರು.
ಕೊಡವರು ಯಾರಿಂದಲೂ ದಯೆಯ ಭಿಕ್ಷೆ ಕೇಳುತ್ತಿಲ್ಲ. ತಮ್ಮ ಪಾರಂಪರಿಕ ನೆಲದಲ್ಲಿ ಸ್ವಾಭಿಮಾನದಿಂದ ಬದುಕಲು ಸಂವಿಧಾನಾತ್ಮಕ ರಕ್ಷಣೆ ಮತ್ತು ಸ್ವಾಯತ್ತತೆಯನ್ನು ಬಯಸುತ್ತಿದ್ದಾರೆ. ಇದು ಅವರ ಸಹಜ, ಜನ್ಮಸಿದ್ಧ ಹಾಗೂ ಮಾನವ ಹಕ್ಕಾಗಿದೆ ಎಂದು ನಾಚಪ್ಪ ಪ್ರತಿಪಾದಿಸಿದರು.
ಮಾನವ ಸರಪಳಿಯಲ್ಲಿ ಪಾಲ್ಗೊಂಡ ಕೊಡವರು ಗುರು-ಕಾರೋಣ, ಸೂರ್ಯ-ಚಂದ್ರ, ಭೂಮಿತಾಯಿ, ವನದೇವಿ, ಕಾವೇರಿ ಜಲದೇವತೆ ಹಾಗೂ ಭಾರತದ ಸಂವಿಧಾನದ ಹೆಸರಿನಲ್ಲಿ CNC ಹೋರಾಟಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವ ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಗೀತೆ ‘ಜನಗಣಮನ’ ಗಾಯನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡವರು
ಕುಲ್ಲಚಂಡ ಸರೋಜ, ಚೆರಿಯಂಡ ಪೂಜಾ, ಕೋಡಿರ ವಿನೋದ್ ನಾಣಯ್ಯ, ಬೇಪಡಿಯಂಡ ದಿನು, ಪಟ್ರಪಂಡ ರಮೇಶ್ ಬೋಪಯ್ಯ, ಬೇಪಡಿಯಂಡ ಬಿದ್ದಪ್ಪ, ಬಲ್ಲಚಂಡ ಸುನಿಲ್ ಬಿದ್ದಪ್ಪ, ಬಲ್ಲಟಿಕಾಳಂಡ ರಾಯ್ ಮಂದಣ್ಣ, ಮಾತಂಡ ಕಂಬು ಉತ್ತಯ್ಯ, ನೆರ್ಪಂಡ ಜಿಮ್ಮಿ ಚೆಂಗಪ್ಪ, ಮುಕ್ಕಾಟಿರ ತಮ್ಮಯ್ಯ, ನೆರ್ಪಂಡ ತಿಮ್ಮಯ್ಯ, ಪಾಲೇಕಂಡ ಪ್ರಧಾನ್ ಪೂಣಚ್ಚ, ಮುಕ್ಕಾಟಿರ ಮುದ್ದು ಮುದ್ದಯ್ಯ, ಬಲ್ಲಚಂಡ ಸಂಪತ್ ಕುಟ್ಟಪ್ಪ, ಚಂಬಂಡ ಜನತ್, ಕೋಡಿರ ರಾಬಿನ್, ಮುಕ್ಕಾಟಿರ ಪೆಮ್ಮಯ್ಯ, ಅಳ್ಳಂಡ ಚಿಣ್ಣಪ್ಪ, ನಡಿಕೇರಿಯಂಡ ರಘು, ನಡಿಕೇರಿಯಂಡ ಬೋಪಯ್ಯ, ಪಾಲೆಂಗಡ ಸೋಮಣ್ಣ, ಮುಕ್ಕಾಟಿರ ಉತ್ತಪ್ಪ, ಕಂಡ್ರತಂಡ ಚೆಂಗಪ್ಪ, ಪಂದಿಯಂಡ ವಾಸು ಮಾಚಯ್ಯ, ಬಲ್ಲಟಿಕಾಳಂಡ ವಿಕ್ರಾಂತ್ ಪೊನ್ನಣ್ಣ, ಬೇಪಡಿಯಂಡ ಪೂಮಣಿ ಅಚ್ಚಯ್ಯ, ಬಿದ್ದಂಡ ಆಕಾಶ್, ನಡಿಕೇರಿಯಂಡ ರಂಜನ್, ಪಾಲೆಂಗಡ ಬೋಪಣ್ಣ, ಮಾತಂಡ ಮನು, ಚಾತಂಡ ಗಿರಿ ಸೋಮಯ್ಯ, ಪಾಲಚಂಡ ಚಿಟ್ಟಿಯಪ್ಪ, ಬಲ್ಲಚಂಡ ದಿನೇಶ್, ಪಾಲಚಂಡ ಅಪ್ಪಯ್ಯ, ಐತಿಚಂಡ ಮಧು ಮಾದಯ್ಯ, ಬಲ್ಲಟಿಕಾಳಂಡ ಮಂಜು ಸುಬ್ಬಯ್ಯ, ನೆರ್ಪಂಡ ಗಾಂಧಿ, ಬಾಚೆಟ್ಟಿರ ಕಾರ್ಯಪ್ಪ, ಪಳಂಗಂಡ ರಾಕೇಶ್, ಅಮ್ಮಂಡ ಶರಣ್ ಅಯ್ಯಪ್ಪ, ಪಾಲೆಯಂಡ ಪ್ರವೀಣ್, ಮುಕ್ಕಾಟಿರ ಮುತ್ತಪ್ಪ, ಅಪ್ಪಾರಂಡ ದೇವಯ್ಯ, ಮುಕ್ಕಾಟಿರ ಸರು ದೇವಯ್ಯ, ಐತಿಚಂಡ ಪೂವಣ್ಣ, ಅಲ್ತಂಡ ದಿನೇಶ್ ಪೊನ್ನಪ್ಪ, ಚೆರುವಾಳಂಡ ತಮ್ಮಿ ಮುದ್ದಪ್ಪ, ಮುಂಡ್ಯೋಳಂಡ ಬೆಲ್ಲು ಕಾರ್ಯಪ್ಪ, ಪಾಂಡಂಡ ರಘುಪತಿ, ಬೇಪಡಿಯಂಡ ಧನು ಪೂಣಚ್ಚ, ಚೋಳಂಡ ಬಿದ್ದಪ್ಪ, ಪಾಲಚಂಡ ಪ್ರವೇಶ್, ಮಂಡೇಡಪಂಡ ರೋಶನ್, ಪಾಂಡಂಡ ಸರು ಅಯ್ಯಪ್ಪ, ಅಂಡ ಗಣಪತಿ, ನೆರ್ಪಂಡ ರಮೇಶ್, ಕೋಡಿರ ಪ್ರಕಾಶ್, ಕೋಡಿರ ಪ್ರದೀಪ್, ಕೋಡಿರ ವಿವೇಕ್, ಕುಲ್ಲಚಂಡ ಜಯ, ಚೋಳಂಡ ವಿಜಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಕೋಡಿರ ವಿನೋದ್ ನಾಣಯ್ಯ ಸ್ವಾಗತಿಸಿ, ನೆರ್ಪಂಡ ಹರ್ಷ ವಂದಿಸಿದರು.
ನ. 23ರಂದು ಹುದಿಕೇರಿಯಲ್ಲಿ ಮಾನವ ಸರಪಳಿ ಕಾರ್ಯಕ್ರಮ
ಕೊಡವ ನ್ಯಾಷನಲ್ ಕೌನ್ಸಿಲ್ನ 10ನೇ ಮಾನವ ಸರಪಳಿ ಕಾರ್ಯಕ್ರಮ ನ. 23ರಂದು ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಅಂಜಿಗೇರಿ ನಾಡಿನ ಹುದಿಕೇರಿಯಲ್ಲಿ ನಡೆಯಲಿದೆ ಎಂದು ಎನ್.ಯು. ನಾಚಪ್ಪ ತಿಳಿಸಿದ್ದಾರೆ.























