ಮಡಿಕೇರಿ, NEWS DESK ನ.19: ಕೊಡಗು ಅಹಿಂದ ಬಳಗದ ಜಿಲ್ಲಾಧ್ಯಕ್ಷ ನಾಪಂಡ ಮುತ್ತಪ್ಪ ಅವರ ನೇತೃತ್ವದ ನಿಯೋಗವು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಅವರನ್ನು ಬೆಂಗಳೂರಿನ ಸರ್ಕಾರಿ ಅತಿಥಿಗೃಹ ಕಾವೇರಿಯಲ್ಲಿ ಭೇಟಿ ಮಾಡಿ ವಿವಿಧ ವಿಚಾರಗಳ ಕುರಿತು ಚರ್ಚಿಸಿತು.
ಕೊಡಗು ಜಿಲ್ಲೆಯಲ್ಲಿ ಅಹಿಂದ ಬಳಗವನ್ನು ಬಲವಾಗಿ ಸಂಘಟಿಸುವ ಅಗತ್ಯತೆ ಹಾಗೂ ಅಹಿಂದ ಸಂಘಟನೆಯ ಅನಿವಾರ್ಯತೆಯ ಕುರಿತು ನಿಯೋಗವು ಮುಖಂಡರ ಗಮನ ಸೆಳೆಯಿತು.
ಜಿಲ್ಲೆಯಲ್ಲಿ ಅಹಿಂದ ವರ್ಗದವರು ರಾಜಕೀಯವಾಗಿ ಕಡೆಗಣಿಸಲ್ಪಡುತ್ತಿರುವುದು, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರೆಯದಿರುವುದು ಹಾಗೂ ಸರ್ಕಾರದ ನಾಮನಿರ್ದೇಶಿತ ಹುದ್ದೆಗಳು ಮತ್ತು ವಿವಿಧ ನಿಗಮ ಮಂಡಳಿಗಳಲ್ಲಿಯೂ ಅಹಿಂದ ವರ್ಗದವರಿಗೆ ಅವಕಾಶ ಕಲ್ಪಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಯಿತು.
ಸರ್ಕಾರದ ಉಳಿದ ಅವಧಿಯಲ್ಲಿ ಅಹಿಂದ ವರ್ಗದ ಅರ್ಹ ಮುಖಂಡರಿಗೆ ನಾಮನಿರ್ದೇಶಿತ ಹುದ್ದೆಗಳು ಹಾಗೂ ನಿಗಮ ಮಂಡಳಿಗಳಲ್ಲಿ ಸೂಕ್ತ ಅವಕಾಶ ಮತ್ತು ಸ್ಥಾನಮಾನ ಕಲ್ಪಿಸಬೇಕೆಂದು ಸಿದ್ದರಾಮಯ್ಯ ಹಾಗೂ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮೈಸೂರಿನ ಅಹಿಂದ ಮುಖಂಡ ಕೆ.ಎಸ್.ಶಿವರಾಮು, ಕರ್ನಾಟಕ ರಾಜ್ಯ ಲ್ಯಾಂಪ್ ಸೊಸೈಟಿ ಮಹಾಮಂಡಲದ ಅಧ್ಯಕ್ಷ ಅರುಣ್ ರಾವ್ ರಾಜಾರಾವ್, ಅಹಿಂದ ಬಳಗ ಕೊಡಗು ಜಿಲ್ಲಾ ಸಮಿತಿಯ ಸಂಘಟನಾ ಕಾರ್ಯದರ್ಶಿ ರವಿ ಅಜ್ಜಳ್ಳಿ, ಪ್ರಧಾನ ಕಾರ್ಯದರ್ಶಿ ಟಿ.ಈ.ಸುರೇಶ್, ಸಮಿತಿ ಸದಸ್ಯರಾದ ಕೂಡಿಗೆಯ ಮಂಜು ಹಾಗೂ ಹೊಸತೋಟದ ಕೊಯಾ ಉಪಸ್ಥಿತರಿದ್ದರು.
















