ಮಡಿಕೇರಿ, NEWS DESK ನ.19: ಕೊಡಗು ಜಿಲ್ಲೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಚಾಲಕರಾಗಿ ಹಾಗೂ ವನವಾಸಿ ಕಲ್ಯಾಣ ಆಶ್ರಮದ ನಿಕಟಪೂರ್ವ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಕ್ಕೇರ ಮನು ಕಾವೇರಪ್ಪ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸರಳ ವ್ಯಕ್ತಿತ್ವ, ನಿಸ್ವಾರ್ಥ ಸಮಾಜಸೇವೆ ಹಾಗೂ ಸಂಘಟನಾ ಚಟುವಟಿಕೆಗಳ ಮೂಲಕ ಗುರುತಿಸಿಕೊಂಡಿದ್ದ ಅವರ ನಿಧನದಿಂದ ಕೊಡಗು ಜಿಲ್ಲೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಕುಟುಂಬದವರು, ಬಂಧು-ಮಿತ್ರರು, ಅಪಾರ ಅಭಿಮಾನಿಗಳು ಹಾಗೂ ಸಾವಿರಾರು ಸ್ವಯಂಸೇವಕರು ಅವರನ್ನು ಕಳೆದುಕೊಂಡು ದುಃಖಿತರಾಗಿದ್ದಾರೆ.
ಸಮಾಜಮುಖಿ ಕಾರ್ಯಗಳಲ್ಲಿ ಸದಾ ಸಕ್ರಿಯರಾಗಿದ್ದ ಮನು ಕಾವೇರಪ್ಪ ಅವರು ಯಾವುದೇ ಆಡಂಬರವಿಲ್ಲದೆ ಎಲೆಮರೆಯ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಸಮಾಜಕ್ಕೆ ಹಾಗೂ ಜನಸಾಮಾನ್ಯರಿಗೆ ಅನ್ಯಾಯವಾದ ಸಂದರ್ಭದಲ್ಲಿ ಧೈರ್ಯವಾಗಿ ಧ್ವನಿ ಎತ್ತುವ ಮೂಲಕ ಹೋರಾಟದ ಮನೋಭಾವವನ್ನು ಮೆರೆದಿದ್ದರು.
ವನವಾಸಿ ಕಲ್ಯಾಣ ಆಶ್ರಮದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು ವನವಾಸಿ ಸಮುದಾಯದ ಶಿಕ್ಷಣ, ಆರೋಗ್ಯ, ಸ್ವಾವಲಂಬನೆ ಹಾಗೂ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗೆ ವಿಶೇಷ ಒತ್ತು ನೀಡಿದ್ದರು. ರಾಜ್ಯಾದ್ಯಂತ ಸಂಘಟನೆಯ ಚಟುವಟಿಕೆಗಳನ್ನು ಬಲಪಡಿಸುವಲ್ಲಿಯೂ ಮಹತ್ವದ ಪಾತ್ರ ವಹಿಸಿದ್ದರು.
ಕೊಡಗು ಜಿಲ್ಲೆಯ ಸಂಘಚಾಲಕರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಟನಾ ಕಾರ್ಯಗಳನ್ನು ಜಿಲ್ಲೆಯ ವಿವಿಧ ಭಾಗಗಳಿಗೆ ವಿಸ್ತರಿಸುವಲ್ಲಿ ಶ್ರಮಿಸಿದ್ದರು. ಯುವಕರಲ್ಲಿ ದೇಶಭಕ್ತಿ, ಶಿಸ್ತು ಹಾಗೂ ಸೇವಾ ಮನೋಭಾವ ಬೆಳೆಸುವ ಮೂಲಕ ಅನೇಕ ಸ್ವಯಂಸೇವಕರಿಗೆ ಮಾರ್ಗದರ್ಶಕರಾಗಿದ್ದರು.
ಕೊಡಗಿನ ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ವಿಚಾರಗಳಲ್ಲಿ ವಿಶೇಷ ಕಾಳಜಿ ಹೊಂದಿದ್ದ ಅವರು, ಜನರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿದ್ದರು. ಕಿರಿಯರು ಹಾಗೂ ಹಿರಿಯರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ಅವರ ಸರಳತೆ ಮತ್ತು ಸೇವಾ ಮನೋಭಾವ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಅವರ ನಿಧನದಿಂದ ದೇವರಪುರ ಗ್ರಾಮ, ಕೊಡಗು ಜಿಲ್ಲೆ, ವನವಾಸಿ ಕಲ್ಯಾಣ ಆಶ್ರಮ ಹಾಗೂ ಸಂಘ ಪರಿವಾರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಸಮಾಜಸೇವೆ, ಸಂಘಟನಾ ಸಾಮರ್ಥ್ಯ ಮತ್ತು ಆದರ್ಶಗಳು ಮುಂದಿನ ಪೀಳಿಗೆಗೆ ಸದಾ ಸ್ಮರಣೀಯವಾಗಿರಲಿವೆ.
ಅಗಲಿದ ಚಕ್ಕೇರ ಮನು ಕಾವೇರಪ್ಪ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಕುಟುಂಬ ವರ್ಗದವರಿಗೆ, ಬಂಧು-ಮಿತ್ರರಿಗೆ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಗಣ್ಯರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
















