ವಿರಾಜಪೇಟೆ, NEWS DESK ನ.19: ಕಾವೇರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕದ ವತಿಯಿಂದ ಟಿ.ಬಿ. ಮತ್ತು ನಶಾಮುಕ್ತ ಭಾರತ ಅಭಿಯಾನದಡಿ ಕಂಡಂಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ನವೆಂಬರ್ 18ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೆಂಗಡ ಎಂ. ಕುಟ್ಟಪ್ಪ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ ಕೇವಲ ಏಳು ದಿನಗಳ ಶಿಬಿರಕ್ಕೆ ಸೀಮಿತವಾಗದೆ, ಅದನ್ನು ಜೀವನದ ಭಾಗವಾಗಿ ಅಳವಡಿಸಿಕೊಳ್ಳಬೇಕು. ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವದ ಗುಣಗಳು, ಶಿಸ್ತು ಮತ್ತು ಸಂಯಮವನ್ನು ಬೆಳೆಸಲು ಸಹಕಾರಿಯಾಗಿದೆ ಎಂದರು.
ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗದೆ ವಿದ್ಯಾಭ್ಯಾಸ ಪೂರ್ಣಗೊಳಿಸಿ ಸಮಾಜದ ಉತ್ತಮ ಪ್ರಜೆಗಳಾಗಬೇಕು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳನ್ನು ಹಿತಮಿತವಾಗಿ ಬಳಸುವುದರೊಂದಿಗೆ ಕಾನೂನುಬಾಹಿರ ಚಟುವಟಿಕೆಗಳಿಂದ ದೂರವಿದ್ದು, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕಂಡಂಗಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಕೆಂಜಂಗಡ ಗಣಪತಿ ಅವರು ಶಿಬಿರಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು.
ಶಾಲೆಯ ಕ್ರೀಡಾ ಸಮಿತಿ ಅಧ್ಯಕ್ಷ ಬಲ್ಲಡಿಚಂಡ ರವಿ ಸೋಮಯ್ಯ ಮಾತನಾಡಿ, ಶಿಬಿರದಲ್ಲಿ ಕಲಿತ ಅನುಭವಗಳನ್ನು ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು. ವ್ಯಕ್ತಿತ್ವ ವಿಕಸನ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಲು ಎನ್ಎಸ್ಎಸ್ ಉತ್ತಮ ವೇದಿಕೆಯಾಗಿದೆ ಎಂದರು.
ಕಂಡಂಗಾಲ ಜೋಡು ಭಗವತಿ ದೇವಸ್ಥಾನದ ನಾಡತಕ್ಕರಾದ ಮಳವಂಡ ಭುವೇಶ್ ದೇವಯ್ಯ ಅವರು ಎನ್ಎಸ್ಎಸ್ನ ಗುರಿ, ಉದ್ದೇಶ ಹಾಗೂ ಮಹತ್ವವನ್ನು ತಿಳಿಸಿ, ವಿದ್ಯಾರ್ಥಿಗಳು ನಾಯಕತ್ವದ ಗುಣ ಮತ್ತು ಶಿಸ್ತನ್ನು ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯ ಬಿ.ಟಿ. ದೇವರಾಜು ಮಾತನಾಡಿ, ಶಿಬಿರಾರ್ಥಿಗಳು ಶಿಬಿರದ ಸಂಪೂರ್ಣ ಸದುಪಯೋಗ ಪಡೆದುಕೊಂಡಿದ್ದಾರೆ. ಅವರಿಂದ ಶಾಲೆಯ ವಿದ್ಯಾರ್ಥಿಗಳೂ ಸ್ಫೂರ್ತಿ ಪಡೆದಿದ್ದು, ಸಮಾಜಸೇವೆಯೇ ಇಂತಹ ಶಿಬಿರಗಳ ಮುಖ್ಯ ಉದ್ದೇಶವಾಗಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾವೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪದ್ಮ ಎಂ.ಕೆ. ಮಾತನಾಡಿ, ಸ್ವಯಂಸೇವಕರು ರಾಷ್ಟ್ರಸೇವೆಗೆ ಸದಾ ಸಿದ್ಧರಾಗಿರಬೇಕು. ರಾಷ್ಟ್ರೀಯ ಸೇವಾ ಯೋಜನೆಯನ್ನು ಕಾಲೇಜು ಮಟ್ಟಕ್ಕೆ ಸೀಮಿತಗೊಳಿಸದೆ ಜೀವನದಲ್ಲಿಯೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮಾಧಿಕಾರಿ ಅನುಪಮ ತಿಮ್ಮಯ್ಯ ಅವರು ವಾರ್ಷಿಕ ವಿಶೇಷ ಶಿಬಿರದ ವರದಿ ವಾಚಿಸಿದರು. ಶಿಬಿರದ ಕೊನೆಯ ದಿನದ ಶಿಬಿರಜ್ಯೋತಿಯನ್ನು ಕಂಡಂಗಾಲ ಜೋಡು ಭಗವತಿ ದೇವಸ್ಥಾನದ ಊರುತಕ್ಕರಾದ ಮೂಕಚಂಡ ದೇವಯ್ಯ ಬೆಳಗಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ಬಳಿಕ ಅನುಪಮ ತಿಮ್ಮಯ್ಯ ಅವರು ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ರೋಷಿನಿ ಮತ್ತು ತಂಡ ರಾ.ಸೇ.ಯೋ. ಗೀತೆಯನ್ನು ಹಾಡಿದರು. ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶಗಳನ್ನು ಇಶಾಮ್ ತಿಳಿಸಿದರು. ಶಿಬಿರದ ಅನಿಸಿಕೆಗಳನ್ನು ಶಿಬಿರದ ನಾಯಕಿ ವೀಣಾ ಹಾಗೂ ಸ್ವಯಂಸೇವಕರಾದ ಶಿವಾನಿ, ರಚನ ಮತ್ತು ನಾಯಕ ಗಣಪತಿ ಹಂಚಿಕೊಂಡರು. ಅನುಶ್ರೀ ಮತ್ತು ತಂಡ ಪ್ರಾರ್ಥಿಸಿದರು.
ರಾಜ್ಯಶಾಸ್ತ್ರ ಉಪನ್ಯಾಸಕಿ ಗಾಯತ್ರಿ ಕೆ.ಪಿ. ಸ್ವಾಗತಿಸಿದರು. ಅನುಪಮ ತಿಮ್ಮಯ್ಯ ವಂದಿಸಿದರು. ವಿದ್ಯಾರ್ಥಿನಿಯರಾದ ವೀಣಾ ಮತ್ತು ಶಯನ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ದಾನಿಗಳು, ಕ್ರೀಡಾ ಸಮಿತಿ ಪದಾಧಿಕಾರಿಗಳು, ವಿ.ಎಸ್.ಎಸ್.ಎನ್. ಉಪಾಧ್ಯಕ್ಷರು, ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಕಾವೇರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
















