ವಿರಾಜಪೇಟೆ, NEWS DESK ನ.19: ತಾಲೂಕಿನ ಅರಮೇರಿ ಕಳಂಚೇರಿ ಮಠದಲ್ಲಿ ಕಳೆದ ಎರಡು ದಶಕಗಳಿಂದ ನಿರಂತರವಾಗಿ ನಡೆಯುತ್ತಿರುವ ಹೊಂಬೆಳಕು ಮಾಸಿಕ ತತ್ವ ಚಿಂತನಾಗೋಷ್ಠಿಯು 250ನೇ ಕಂತಿನ ಸಂಭ್ರಮದತ್ತ ಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 13ರಂದು ಶ್ರೀಮಠದ ಸಭಾಂಗಣದಲ್ಲಿ 250ನೇ ವಿಶೇಷ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ.
ಕಾರ್ಯಕ್ರಮದ ರೂಪುರೇಷೆ ಸಿದ್ಧಪಡಿಸುವ ಉದ್ದೇಶದಿಂದ ಅರಮೇರಿ ಕಳಂಚೇರಿ ಮಠದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಅರಮೇರಿ ಕಳಂಚೇರಿ ಮಠದ ಆಶ್ರಯದಲ್ಲಿ 2002ರ ನವೆಂಬರ್ 15ರಂದು ಹೊಂಬೆಳಕು ಮಾಸಿಕ ತತ್ವ ಚಿಂತನಾಗೋಷ್ಠಿಗೆ ಚಾಲನೆ ನೀಡಲಾಗಿತ್ತು. ಬಳಿಕ ಡಿಸೆಂಬರ್ 1, 2002ರಂದು ಬಸವ ಸಮಿತಿ ಬೆಂಗಳೂರು ಹಾಗೂ ಮಠದ ಸಹಯೋಗದಲ್ಲಿ ಬಸವ ವಾಹಿನಿ ಕಾರ್ಯಕ್ರಮದ ಅಂಗವಾಗಿ ಮೊದಲ ಗೋಷ್ಠಿ ಶ್ರೀಮಠದಲ್ಲಿ ನಡೆದಿತ್ತು. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಆರಂಭಗೊಂಡ ಈ ಚಿಂತನಾಮಾಲಿಕೆ ಇದೀಗ 250ನೇ ಕಂತನ್ನು ತಲುಪುತ್ತಿರುವುದು ವಿಶೇಷವಾಗಿದೆ.
ಸಭೆಯ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅರಮೇರಿ ಕಳಂಚೇರಿ ಮಠದ ಪೀಠಾಧಿಪತಿ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು, ಸಮಾಜದಲ್ಲಿ ಉತ್ತಮ ವಿಚಾರಗಳನ್ನು ಬಿತ್ತುವ ಉದ್ದೇಶದಿಂದ ಆರಂಭವಾದ ಹೊಂಬೆಳಕು ಕಾರ್ಯಕ್ರಮವು ಭಕ್ತರು ಹಾಗೂ ಚಿಂತಕರ ಸಹಕಾರದಿಂದ 250ನೇ ಮೈಲಿಗಲ್ಲು ತಲುಪುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಈ ವಿಶೇಷ ಕಾರ್ಯಕ್ರಮಕ್ಕೆ ಖ್ಯಾತ ಚಿಂತಕರು ಹಾಗೂ ಶಿಕ್ಷಣ ತಜ್ಞರಾದ ಡಾ. ಗುರುರಾಜ ಕರಜಗಿ ಅವರು ಆಗಮಿಸುತ್ತಿರುವುದು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದೆ. ಅವರ ಪ್ರೇರಣಾದಾಯಿ ಮಾತುಗಳು ಹಾಗೂ ಮೌಲ್ಯಾಧಾರಿತ ಚಿಂತನೆಗಳು ಇಂದಿನ ಪೀಳಿಗೆಗೆ ಅತ್ಯಂತ ಅಗತ್ಯವಾಗಿದ್ದು, ಶಿಕ್ಷಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಅವರ ವಿಚಾರಧಾರೆಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ವಿರಾಜಪೇಟೆಯ ಖ್ಯಾತ ವೈದ್ಯರು, ಪಕ್ಷಿತಜ್ಞರು ಹಾಗೂ ಮಠದ ಹಿತೈಷಿ ಡಾ. ನರಸಿಂಹನ್ ಅವರು, ಹೊಂಬೆಳಕು ಕಾರ್ಯಕ್ರಮವು ಕಳೆದ ಎರಡು ದಶಕಗಳಿಂದ ನಿರಂತರವಾಗಿ ಜ್ಞಾನದ ಬೆಳಕನ್ನು ಪಸರಿಸುತ್ತಿದೆ. ಡಾ. ಗುರುರಾಜ ಕರಜಗಿ ಅವರ ಉಪನ್ಯಾಸದ ಮೂಲಕ 250ನೇ ಕಂತನ್ನು ಸ್ಮರಣೀಯವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಸಾಹಿತ್ಯಾಸಕ್ತರು, ಭಕ್ತರು, ಶಿಕ್ಷಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸಲಹೆ ನೀಡಿದರು.
250ನೇ ವಿಶೇಷ ಕಾರ್ಯಕ್ರಮಕ್ಕೆ ಡಾ. ಗುರುರಾಜ ಕರಜಗಿ ಅವರು ಆಗಮಿಸಲು ಒಪ್ಪಿಗೆ ಸೂಚಿಸಿರುವುದು ಸಭೆಯಲ್ಲಿ ಸಂತಸಕ್ಕೆ ಕಾರಣವಾಯಿತು. ಕಾರ್ಯಕ್ರಮದ ಸಂಘಟನೆ, ಆಹ್ವಾನ ಪತ್ರಿಕೆ ಹಾಗೂ ವೇದಿಕೆ ಸಿದ್ಧತೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಸಭೆಯಲ್ಲಿ ಮಠದ ಹಿತೈಷಿಗಳಾದ ತಿಮ್ಮಪ್ಪಯ್ಯ, ಆಶಾ ತಿಮ್ಮಪ್ಪಯ್ಯ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೇಶವ ಕಾಮತ್, ಶ್ರೀಕಾಂತ್ ರಾವ್, ಡಾ. ನರಸಿಂಹನ್ ಸೇರಿದಂತೆ ಮಠದ ಭಕ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು ಸಲಹೆ-ಸೂಚನೆಗಳನ್ನು ನೀಡಿದರು.
















