ಚೆಟ್ಟಳ್ಳಿ ನ.25 NEWS DESK : ಕೊಡಗಿನ ಸಾಂಪ್ರದಾಯಿಕ ಪುತ್ತರಿ ಹಬ್ಬವನ್ನು ಚೆಟ್ಟಳ್ಳಿಯ ಪುತ್ತರಿರ ಕುಟುಂಬಸ್ಥರು ತಮ್ಮ ಐನ್ ಮನೆಯಲ್ಲಿ ಸಂಪ್ರದಾಯಬದ್ಧವಾಗಿ ಹಾಗೂ ಸಡಗರದಿಂದ ಆಚರಿಸಿದರು. ಇಗ್ಗುತ್ತಪ್ಪ ದೇವರ ಕಟ್ಟುಪಾಡಿನಂತೆ ಐನ್ ಮನೆಯ ಹಟ್ಟಿಯಲ್ಲಿ ನೆರೆ ಕಟ್ಟುವ ಮೂಲಕ ಹಬ್ಬದ ಆಚರಣೆಗೆ ಚಾಲನೆ ನೀಡಲಾಯಿತು. ಬಳಿಕ ಪುತ್ತರಿ ಗೆಣಸು, ಅಡಿಕೆ ಹಿಟ್ಟು ಸೇರಿದಂತೆ ವಿವಿಧ ಸಾಂಪ್ರದಾಯಿಕ ಫಲಹಾರಗಳನ್ನು ಸೇವಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು. ಕುಟುಂಬದ ಹಿರಿಯರಾದ ಗಣೇಶ ಭೀಮಯ್ಯ ಅವರು ದೇವರ ನೆಲೆಯಲ್ಲಿ ನಿಂತು, ಧಾನ್ಯಲಕ್ಷ್ಮಿಯನ್ನು ಮನೆಗೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ಕುಟುಂಬಕ್ಕೆ ಒಳಿತಾಗಲಿ, ಸಮೃದ್ಧಿ ನೆಲೆಸಲಿ ಎಂದು ಪ್ರಾರ್ಥಿಸಿದರು. ತಳಿಯಕ್ಕಿ ದೀಪ ಹಿಡಿದು, ದುಡಿಕೊಟ್ಟ್ ಹಾಡಿನೊಂದಿಗೆ ಪುತ್ತರಿ ಕುತ್ತಿಯನ್ನು ಹೊತ್ತ ಪುತ್ತರಿರ ರವಿಮಂದಣ್ಣ ಅವರ ನೇತೃತ್ವದಲ್ಲಿ ಕುಟುಂಬಸ್ಥರು ಭತ್ತದ ಗದ್ದೆಗೆ ತೆರಳಿದರು. ಗಾಳಿಗೆ ಗುಂಡು ಹಾರಿಸಿ, ಕದಿರಿಗೆ ನೆರೆ ಕಟ್ಟಿ ಪುತ್ತರಿ ಕದಿರನ್ನು ತೆಗೆಯುವ ಮೂಲಕ ಸುಗ್ಗಿಯ ಸಂಭ್ರಮಕ್ಕೆ ಸಾಕ್ಷಿಯಾದರು. ನಂತರ ದೇವರನ್ನು ಪ್ರಾರ್ಥಿಸುತ್ತಾ ಕದಿರಿನೊಂದಿಗೆ ಐನ್ ಮನೆಗೆ ಮರಳಿದರು. ಮಹಿಳೆಯರು ಅಕ್ಕಿ ಹಾಕಿ ನಮಿಸುವ ಮೂಲಕ ಧಾನ್ಯಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಂಡರು. ಬಳಿಕ ಏಲಕ್ಕಿ ಪುಟ್ಟ್ ಅಂಟಿಸುವುದು ಹಾಗೂ ಕನ್ನಿಕೋಂಬರೆಯಲ್ಲಿ ಹಬ್ಬದ ಸಾಂಪ್ರದಾಯಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು.



































