ಚೆಟ್ಟಳ್ಳಿ ನ.25 NEWS DESK : ಚೆಟ್ಟಳ್ಳಿ ಸಮೀಪದ ಚೇರಳ ಶ್ರೀಮಂಗಲದ ಪುರಾತನ ಶ್ರೀ ಭಗವತಿ ದೇವಾಲಯದಲ್ಲಿ ಕೊಡಗಿನ ಪುತ್ತರಿ ಹಬ್ಬದ ಸಂಪ್ರದಾಯದಂತೆ ಪುತ್ತರಿ ಧಾರೆ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿತು. ಮೊದಲಿಗೆ ವಿಘ್ನೇಶ್ವರ, ನಾಗದೇವರು ಹಾಗೂ ಕ್ಷೇತ್ರಪಾಲಕನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಭಗವತಿ ದೇವಿಗೆ ಪುತ್ತರಿ ಹಬ್ಬದ ಪ್ರಯುಕ್ತ ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಈ ಸಂದರ್ಭ ಹಿರಿಯರಾದ ಬಟ್ಟೀರ ಕಾವೇರಪ್ಪ ಹಾಗೂ ಬಟ್ಟೀರ ಕಾಳಪ್ಪ ಮಾತನಾಡಿ, ಪುತ್ತರಿ ಹಬ್ಬದ ಅಂಗವಾಗಿ ದೇವಿಗೆ ಸಲ್ಲಿಸುವ ಪೂಜೆಯ ಫಲವಾಗಿ ನಾಡಿನ ಎಲ್ಲರಿಗೂ ಸುಖ, ಶಾಂತಿ ಹಾಗೂ ಸಮೃದ್ಧಿ ಲಭಿಸಲಿ ಎಂದು ಹಾರೈಸಿದರು. ಇಗ್ಗುತ್ತಪ್ಪ ದೇವರ ನೆಲೆಯಲ್ಲಿ ನಿಗದಿಪಡಿಸಿರುವ ಹಬ್ಬದ ಸಮಯ ಹಾಗೂ ಸಂಪ್ರದಾಯದಂತೆ ಎಲ್ಲರೂ ಪುತ್ತರಿ ಹಬ್ಬವನ್ನು ಆಚರಿಸುವಂತೆ ತಿಳಿಸಿದರು. ದೇವರು ಎಲ್ಲರಿಗೂ ಒಳಿತನ್ನು ಕರುಣಿಸಲಿ ಎಂದು ಪ್ರಾರ್ಥಿಸಿದರು. ಪೂಜೆಯ ಬಳಿಕ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ನಂತರ ಅನ್ನಸಂತರ್ಪಣೆ ನಡೆಯಿತು. ಈ ಸಂದರ್ಭ ಊರಿನವರು ಪಾಲ್ಗೊಂಡಿದ್ದರು.



































