ಗ್ರಾಮೀಣ ಸಾಧನೆ : ಭತ್ತದ ತೆನೆಯಿಂದ ಭತ್ತವನ್ನು ಬೇರ್ಪಡಿಸುವ ಯಂತ್ರ ತಯಾರಿಕೆ

24/01/2023

ಮಡಿಕೇರಿ ಜ.24 : ತನ್ನ ಗುರುಗಳ ಸಹಕಾರದೊಂದಿಗೆ ಭತ್ತದ ತೆನೆಯಿಂದ ಭತ್ತವನ್ನು ಬೇರ್ಪಡಿಸುವ ಯಂತ್ರವನ್ನು ತಯಾರಿಸಿ ರಾಜ್ಯದುದ್ದಗಲಕ್ಕೂ ನಡೆದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯುತ್ತಿರುವ ಬಡವರ ಮನೆಯ ವಿದ್ಯಾರ್ಥಿನಿ ಈಕೆ.
 ಮಡಿಕೇರಿ ಸಮೀಪದ ಮೇಕೇರಿ ಗ್ರಾಮದ ನಿವಾಸಿ ಕಾರ್ಮಿಕ ಶ್ರಮಜೀವಿ ಪಿ. ಶಿವಕುಮಾರ್ ರವರ ಪುತ್ರಿ ಮೇಘಾ ಎಸ್ ಅವರು ಪ್ರಸ್ತುತ ಹಾಕತ್ತೂರಿನ ಪ್ರೌಢಶಾಲೆಯ ಹತ್ತನೇಯ ತರಗತಿಯಲ್ಲಿ ಓದುತ್ತಿದ್ದಾಳೆ.
ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ತಾಲ್ಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾಳೆ.
ಕುಶಾಲನಗರದಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಧಾರವಾಡದಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಎಂಟನೇಯ ಸ್ಥಾನವನ್ನು ಪಡೆದಿದ್ದಾಳೆ. ಇದೀಗ ಕೇರಳದ ತ್ರಿಶೂರ್ ನಲ್ಲಿ ನಡೆಯಲಿರುವ ದಕ್ಷಿಣ ವಿಭಾಗ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.  ವಿದ್ಯಾರ್ಥಿನಿಯ ಈ ಸಾಧನೆಗೆ ಮೇಕೇರಿ ಗ್ರಾಮದ ಸ್ವಾಗತ ಯುವಕ ಸಂಘ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಪದಾಧಿಕಾರಿಗಳು  ವಿದ್ಯಾರ್ಥಿನಿ ಮನೆಗೆ ಭೇಟಿ ನೀಡಿ ಅಭಿನಂಧನೆ ಸಲ್ಲಿಸಿದರು. ಮುಂದಿನ ವಿಭಾಗ ಮಟ್ಟದ ಸ್ಫರ್ಧೆಗೆ ತೆರಳಲು ಸಂಘದ ವತಿಯಿಂದ ಆರ್ಥಿಕ ಸಹಾಯ ನೀಡಿದರು. ಯುವಕ ಸಂಘದ ಅಧ್ಯಕ್ಷ ವಿಜು ಹರೀಶ್ ಸದಸ್ಯ ಭವನ್, ಸಾಮಾಜಿಕ ಕಾರ್ಯಕರ್ತ ಸತ್ಯ ಕರ್ಕೇರ ಉಪಸ್ಥಿತರಿದ್ದರು.