ಮಡಿಕೇರಿ ಜ.26 : ವಿರಾಜಪೇಟೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ 74 ನೇ ಗಣರಾಜ್ಯೋತ್ಸವದ ಪ್ರಯುಕ್ತ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣಗೊಂಡ ಅಮೃತ್ ಸರೋವರ ಕೆರೆಗಳ ದಡದಲ್ಲಿ ನಿವೃತ್ತ ಸೈನಿಕರಿಂದ ಧ್ವಜಾರೋಹಣ ನಡೆಯಿತು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಡಿ ಕೆರೆಗಳನ್ನು ಸಂರಕ್ಷಣೆ ಮಾಡುವ ಸಲುವಾಗಿ ಸಮಗ್ರ ಕೆರೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಈ ಬಾರಿಯ ಗಣರಾಜ್ಯೋತ್ಸವನ್ನು ವಿಶೇಷವಾಗಿ ಹಾಗೂ ಅರ್ಥ ಪೂರ್ಣವಾಗಿ ಆಚರಿಸಲು ಆಯುಕ್ತಾಲಯವು ನಿರ್ದೇಶನವನ್ನು ನೀಡಿತ್ತು, ಅದರಂತೆ ಅಮೃತ್ ಸರೋವರ ಕೆರೆಗಳ ದಡದಲ್ಲಿ ನಿವೃತ್ತ ಸೈನಿಕರಿಂದ ಧ್ವಜಾರೋಹಣ ಕೈಗೊಂಡು, ಶಾಲಾ ಮಕ್ಕಳನ್ನು ಒಳಗೊಂಡಂತೆ ಮಕ್ಕಳಿಗೆ ಪರಿಸರ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನವನ್ನು ವಿತರಿಸಿ, ನೀರಿನ ಮಹತ್ವ ಹಾಗೂ ಜಲಸಂಜೀವಿನಿ ಯೋಜನೆಯ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು.
ವಿರಾಜಪೇಟೆ ತಾಲ್ಲೂಕಿನ ಮಾಲ್ದಾರೆ, ಕಿರುಗೂರು, ಬಲ್ಯಮಂಡೂರು, ಹುದಿಕೇರಿ, ಪೊನ್ನಂಪೇಟೆ, ಬಿ.ಶೆಟ್ಟಿಗೇರಿ, ಬಾಳೆಲೆ, ಚೆನ್ನಯ್ಯನಕೋಟೆ, ಗ್ರಾಮ ಪಂಚಾಯಿತಿಗಳಲ್ಲಿ 74ನೇ ಗಣರಾಜ್ಯೋತ್ಸವನ್ನು ವಿಶೇಷವಾಗಿ ಅಮೃತ್ ಸರೋವರಗಳ ದಡಗಳಲ್ಲಿ ಧ್ವಜಾರೋಹಣ ಕೈಗೊಳ್ಳುವ ಮೂಲಕ ನೀರಿನ ಮಹತ್ವ ಹಾಗೂ ಕೆರೆಗಳನ್ನು ಉಳಿಸುವ ನಿಟ್ಟಿನಲ್ಲಿ ಸಂದೇಶ ನೀಡಲಾಯಿತು.
ಇದೇ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ನಿವೃತ್ತ ಸೈನಿಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕ ಅಭಿಯಂತರರು, ತಾಲ್ಲೂಕು ಐ.ಇ.ಸಿ.ಸಂಯೋಜಕರು ಇತರರು ಇದ್ದರು.







