ಮಡಿಕೇರಿ ಜ.26 : ದೇಶದ ಆಡಳಿತದ ಚುಕ್ಕಾಣಿಯನ್ನು ಸುದೀರ್ಘಾವಧಿ ತನ್ನ ಕೈಯಲ್ಲಿ ಹಿಡಿದಿದ್ದ ಕಾಂಗ್ರೆಸ್ ಪಕ್ಷವು, ತನ್ನ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸುವುದಕ್ಕೆ ಬದಲಾಗಿ ‘ನಾಟಕ’ವನ್ನಷ್ಟೆ ಮಾಡಿತ್ತೆಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವ್ಯಂಗ್ಯವಾಡಿದ್ದಾರೆ.
ಮಡಿಕೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಗಳಾದ ಬಳಿಕ, ರಾಷ್ಟ್ರದ ಪ್ರಗತಿ ಕಾರ್ಯಗಳನ್ನು ಚುರುಗೊಳಿಸಿ, ದೇಶದ ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತಿದ್ದಾರೆ. ಇಂತಹ ಕಾರ್ಯ ಕಾಂಗ್ರೆಸ್ ಅವಧಿಯಲ್ಲಿ ಯಾಕೆ ಸಾಧ್ಯವಾಗಿಲ್ಲವೆಂದು ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷ ಇಲ್ಲಿಯವರೆಗೂ ಒಂದು ಸಮುದಾಯವನ್ನು ತನ್ನ ಓಟ್ ಬ್ಯಾಂಕ್ ಮಾಡಿಕೊಂಡು, ಸಮಾಜವನ್ನು ಒಡೆಯುತ್ತ ರಾಜಕಾರಣ ಮಾಡುತ್ತಿದೆ. ಆ ಪಕ್ಷದ ಇಂತಹ ನಿಲುವುಗಳಿಗೆ ಜನತೆ ಉತ್ತರವನ್ನು ಈಗಾಗಲೆ ನೀಡಿದ್ದು, ಮುಂದೆಯೂ ತಕ್ಕ ಪಾಠ ಕಲಿಸಲಿದ್ದಾರೆಂದು ನಾಗೇಶ್ ಹೇಳಿದರು.







