ಕಾರ್ಯಪ್ಪ ಕಾಲೇಜ್ ನಲ್ಲಿ ಫೀ.ಮಾ.ಕಾರ್ಯಪ್ಪ ಜನ್ಮ ದಿನಾಚರಣೆ : ಕಾರ್ಯಪ್ಪ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ

ಮಡಿಕೇರಿ ಜ.28 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ದೇಶ ಕಂಡ ಅಪ್ರತಿಮ, ಧೀಮಂತ ವ್ಯಕ್ತಿತ್ವದ ವೀರಸೇನಾನಿ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಯುವ ಸಮೂಹ ದೇಶಪ್ರೇಮ ಬೆಳೆಸಿಕೊಳ್ಳಬೇಕು ಎಂದು ಎನ್‍ಸಿಸಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ಜೆಫಿರಿನ್ ಗಿಲ್ಬರ್ಟ್ ಅರಾನ್ಹಾ ಕಿವಿಮಾತು ಹೇಳಿದರು.
ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ನಡೆದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ 124ನೇ ಜನ್ಮದಿನಾಚರಣೆಯ ಸಭಾ ಕಾರ್ಯಕ್ರಮ ಹಾಗೂ ಕಾರ್ಯಪ್ಪ ಅವರಿಗೆ ಸಂಬಂಧಿಸಿದ ಪುಸ್ತಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಪ್ಪ ಅವರ ದೇಶಪ್ರೇಮ, ವ್ಯಕ್ತಿತ್ವ, ಶಿಸ್ತು ಬದ್ಧ ಜೀವನ, ದೂರದೃಷ್ಟಿ, ಸಮಯ ಪ್ರಜ್ಞೆ, ಸ್ವಾರ್ಥರಹಿತ ಸೇವೆಯನ್ನು ಇಂದಿನ ಯುವ ಜನಾಂಗ ಅನುಸರಿಸಬೇಕು. ದೇಶ ಸೇವೆ ಮೂಲಕ ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ, ವಿದ್ಯಾರ್ಥಿಗಳು ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಂತಹ ಸಾಧಕ ವ್ಯಕ್ತಿಗಳನ್ನು ಮಾದರಿಯಾಗಿಸಿಕೊಂಡು ತಮ್ಮ ಗುರಿಯತ್ತ ಸಾಗಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಪ್ಪ ಅವರು ಕಠಿಣ ಪರಿಶ್ರಮದಿಂದ ಭಾರತೀಯ ಸೇನೆಯ ಉನ್ನತ ಸ್ಥಾನಕ್ಕೇರಿದರು. ವಿದ್ಯಾರ್ಥಿಗಳು ಅವರ ಮೌಲ್ಯಗಳನ್ನು ಅಳವಡಿಸಿಕೊಂಡಲ್ಲಿ ಉತ್ತಮ ಸ್ಥಾನಮಾನವನ್ನು ಪಡೆಯಬಹುದು. ಪರಿಣಾಮಕಾರಿಯಾಗಿ ಸಮಾಜಸೇವೆ ಮತ್ತು ದೇಶಸೇವೆಯಲ್ಲಿ ತೊಡಗಿಸಿಕೊಳ್ಳಬಹುದು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರು ನಿರ್ದಿಷ್ಟ ಗುರಿ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ತಮ್ಮ ಕ್ಷೇತ್ರದ ಸಾಧಕರನ್ನು ಮಾದರಿಯಾಗಿಸಿಕೊಂಡು ಸಾಧನೆಯೆಡೆಗೆ ಮುನ್ನುಗ್ಗಬೇಕು ಎಂದು ಕರೆ ನೀಡಿದರು.
ಕಾಲೇಜಿನ ಹಿಂದಿ ವಿಭಾಗದ ಸಹಾಯಕ ಉಪನ್ಯಾಸಕ ಡಾ.ಶ್ರೀಧರ್ ಹೆಗಡೆ ಮಾತನಾಡಿ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರು ಸೇನೆಯಲ್ಲಿ ಮಾಡಿದ ಸಾಧನೆಯಿಂದ ದೇಶ ವಿದೇಶದಲ್ಲಿ ಸಿಕ್ಕ ಗೌರವವನ್ನು ಮರೆಯುವಂತ್ತಿಲ್ಲ. ಶಿಸ್ತು, ಸಮಯ ಪಾಲನೆಯ ಇನ್ನೊಂದು ಹೆಸರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ. ಅವರ ಹೆಸರಿನಲ್ಲಿ ಕಾಲೇಜು ಇರುವುದು ಹೆಮ್ಮೆಯ ವಿಚಾರ. ವಿದ್ಯಾರ್ಥಿಗಳು ಕಾರ್ಯಪ್ಪ ಅವರ ಆದರ್ಶವನ್ನು ಮೈಗೂಡಿಸಿಕೊಳ್ಳುವ ಸಂಕಲ್ಪ ತೊಡಬೇಕು ಎಂದರು.
ಕಾರ್ಯಪ್ಪ ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥ ಹಾಗೂ ವಿದ್ಯಾರ್ಥಿ ಸಂಘದ ಸಲಹೆಗಾರ ತಲ್ವಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಭಾರತದ ಮೊದಲ ಮಹಾದಂಡ ನಾಯಕನಾಗಿ ಗೌರವಕ್ಕೆ ಪಾತ್ರರಾದರು. ಕೊಡಗಿನ ಕೀರ್ತಿಯನ್ನು ದೇಶ ವಿದೇಶಗಳಲ್ಲೂ ಹೆಚ್ಚಿಸಿ, ಸಮಾಜ ಸೇವೆ, ಶಿಸ್ತುಬದ್ಧತೆಯಿಂದ ಯುವ ಜನತೆಗೆ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೂ ಮೊದಲು ಗಣ್ಯರು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು.
ಕಾರ್ಯಪ್ಪ ಜನ್ಮದಿನದ ಪ್ರಯುಕ್ತ ನಡೆಸಲಾದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ಎನ್‍ಸಿಸಿ ಕಮಾಂಡಿಂಗ್ ಅಧಿಕಾರಿ ಕರ್ನಲ್ ಜೆಫಿರಿನ್ ಗಿಲ್ಬರ್ಟ್ ಅರಾನ್ಹಾ ಅವರಿಗೆ ಕಾಲೇಜಿನ ಪರವಾಗಿ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಗಣಿತ ಶಾಸ್ತ್ರದ ಮುಖ್ಯಸ್ಥ ಡಾ.ರಾಜೇಂದ್ರ, ಎನ್‍ಎಸ್‍ಎಸ್ ಸಂಯೋಜಕ ಡಾ.ಮಹಾದೇವಯ್ಯ, ಗ್ರಾಂಥಪಾಲಕಿ ಡಾ.ವಿಜಯಲತ, ಸ್ನಾತಕೋತ್ತರ ಕೊಡವ ಭಾಷಾ ಅಧ್ಯಾಯನದ ಸಂಯೋಜಕ ಎಂ.ಎನ್.ರವಿಶಂಕರ್, ರಾಜ್ಯಶಾಸ್ತ್ರ ವಿಭಾಗದ ಡಾ.ಶಹಬರ್ ಪಾಷ, ವಿದ್ಯಾರ್ಥಿ ಸಂಘದ ನಾಯಕಿ ಅಪೂರ್ವ ಸರಳಾಯ, ಎನ್‍ಸಿಸಿ ನಾಯಕ ಆದಿತ್ಯ, ವಿವಿಧ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಎನ್‍ಸಿಸಿ ಕೆಡೆಟ್‍ಗಳು ಪ್ರಾರ್ಥಿಸಿ, ಸಿ.ಸಿ.ಅನನ್ಯ ಸ್ವಾಗತಿಸಿ, ನಿಶ್ಚಿತ ನಿರೂಪಿಸಿ, ನಯನ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ನಡೆದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.