Advertisement
2:53 AM Saturday 2-December 2023

ಕೇವಲ ಅಕ್ಕಿ, ಬೇಳೆ ನೀಡಿದರೆ ಬಡತನದಿಂದ ಹೊರಬರಲು ಸಾಧ್ಯವಿಲ್ಲ, ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು

04/02/2023

ಮಡಿಕೇರಿ ಫೆ.4 : ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯದ 224 ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಸ್ಪರ್ಧಿಸಲಿದೆ ಎಂದು ಎ.ಎ.ಪಿ ರಾಜ್ಯ ಕಾರ್ಯಾಧ್ಯಕ್ಷ ಬಿ.ಟಿ.ನಾಗಣ್ಣ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 196 ಕ್ಷೇತ್ರಗಳಿಗೆ 390 ಆಕಾಂಕ್ಷಿಗಳಿದ್ದಾರೆ. ಕೊಡಗು ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಐವರು ಆಕಾಂಕ್ಷಿಗಳಿದ್ದು, ಮತದಾರರೊಂದಿಗೆ ಹೆಚ್ಚು ಸಂಪರ್ಕದಲ್ಲಿರುವ ಜನಪರ ವ್ಯಕ್ತಿಗಳಿಗೆ ಅವಕಾಶ ನೀಡಲಾಗುವುದು ಎಂದರು.
ಬಡತನದಿoದ ಹೊರಬರಲು ಪ್ರತಿಯೊಬ್ಬರಿಗೂ ಶಿಕ್ಷಣ ಬೇಕು. ಆದರೆ, ಇಂದು ಶಿಕ್ಷಣ ವ್ಯವಹಾರ ಆಗಿದೆ. ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ, ವೈದ್ಯಕೀಯ ಸೀಟ್ ಪಡೆಯುವುದು ಗ್ರಾಮೀಣ ವಿದ್ಯಾರ್ಥಿಗಳಿಗೆ ಕಷ್ಟವಾಗಿದೆ, ನಗರ ಪ್ರದೇಶದವರಿಗೆ ಸುಲಭದ ತುತ್ತಾಗಿದೆ. ಈ ರೀತಿಯ ತಾರತಮ್ಯ ಇರಬಾರದು. ಕಟ್ಟಕಡೆಯ ವ್ಯಕ್ತಿಗೂ ಗುಣಾತ್ಮಕ ಶಿಕ್ಷಣ ಸಿಗುವಂತಾಗಬೇಕು ಎಂದು ಹೇಳಿದರು.
ಕೇವಲ ಅಕ್ಕಿ, ಬೇಳೆ ನೀಡಿದರೆ ಬಡತನದಿಂದ ಹೊರಬರಲು ಸಾಧ್ಯವಿಲ್ಲ. ಭ್ರಷ್ಟಾಚಾರ ನಿರ್ಮೂಲನೆ ಆಗಬೇಕು, ಉಚಿತ ಆರೋಗ್ಯ ಸೇವೆ ನೀಡುವಂತಾಗಬೇಕು. ದೆಹಲಿಯಲ್ಲಿ ಈ ವ್ಯವಸ್ಥೆ ಇದ್ದು, ಇದು ದೇಶವ್ಯಾಪಿ ಪಸರಿಸಬೇಕು ಎಂದರು.
ಪ್ರತಿದಿನ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದ್ದು, ಉದ್ಯೋಗ ಸೃಷ್ಟಿ ಮರೀಚಿಕೆಯಾಗಿದೆ. ರಾಜಕೀಯ ನಾಯಕರು ಸಮಸ್ಯೆ ಮತ್ತು ಅಭಿವೃದ್ಧಿಗಳ ಬಗ್ಗೆ ಮಾತನಾಡದೆ ಸಿ.ಡಿ ಸೇರಿದಂತೆ ಕ್ಷುಲ್ಲಕ ವಿಚಾರಗಳ ಕುರಿತು ಚರ್ಚೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಆಮ್ ಆದ್ಮಿ ಪಕ್ಷ ಭ್ರಷ್ಟಾಚಾರವನ್ನು ಸಹಿಸುವುದಿಲ್ಲ, ಮತದಾರರು ಪಕ್ಷ ಮತ್ತು ಅಭ್ಯರ್ಥಿಯ ಆರ್ಥಿಕ ಶಕ್ತಿ ನೋಡದೆ ಬದಲಾವಣೆ ತರಬೇಕು. ನಮಗೆ ಅವಕಾಶ ನೀಡಿದರೆ ದೆಹಲಿ ಮಾದರಿಯಲ್ಲಿ ಬದಲಾವಣೆ ತರುತ್ತೇವೆ ಎಂದು ನಾಗಣ್ಣ ಭರವಸೆ ನೀಡಿದರು.
ಮಾರ್ಚ್ ಮೊದಲ ವಾರ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದ ಅವರು, ಅರವಿಂದ ಕೇಜ್ರಿವಾಲ್ ಫೆ.26 ರಂದು ದಾವಣಗೆರೆಗೆ ಆಗಮಿಸುತ್ತಿದ್ದು, ಈ ಸಂದರ್ಭ ಬೂತ್ ಮಟ್ಟದ ಕಾರ್ಯಕರ್ತರಿಗೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ಚನ್ನಪ್ಪಗೌಡ, ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ, ರಾಜ್ಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಜಿಲ್ಲಾ ಕಾರ್ಯದರ್ಶಿ ಪೃಥ್ವಿ ಹಾಗೂ ಸ್ಪರ್ಧಾಕಾಂಕ್ಷಿ ವೆಂಕಟೇಶ ಉಪಸ್ಥಿತರಿದ್ದರು.