ಕಾಡಾನೆ ದಾಳಿ : ಕೃಷಿ ಕಾರ್ಮಿಕ ಬಲಿ : ಕೊಡ್ಲಿಪೇಟೆಯ ಶಾಂತಪುರ ಗ್ರಾಮದಲ್ಲಿ ಘಟನೆ
05/02/2023

ಮಡಿಕೇರಿ ಫೆ.5 : ಕಾಡಾನೆ ದಾಳಿಯಿಂದ ಕೃಷಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಕೊಡ್ಲಿಪೇಟೆಯ ಶಾಂತಪುರ ಗ್ರಾಮದ ಹೇಮಾವತಿ ಹಿನ್ನೀರಿನ ಬಳಿ ನಡೆದಿದೆ.
ಸ್ಥಳೀಯ ಕಾರ್ಮಿಕ ಕುಮಾರ (40) ಮೃತ ದುರ್ದೈವಿ. ಭತ್ತದ ಪೈರು ನಾಟಿ ಮಾಡಲು ಬೆಳಗ್ಗೆ ಕುಮಾರ ಹಾಗೂ ದೊಡ್ಡಯ್ಯ ಎಂಬುವವರು ತೆರಳಿದ್ದರು. ಈ ಸಂದರ್ಭ ಹೊಳೆ ಸಮೀಪದ ಕರಿಕಡ್ಡಿ ಅರಣ್ಯ ಭಾಗದಿಂದ ಬಂದ ಕಾಡಾನೆ ಕುಮಾರ ಅವರ ಮೇಲೆ ದಾಳಿ ಮಾಡಿದೆ. ದೊಡ್ಡಯ್ಯ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶನಿವಾರಸಂತೆ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್, ವಲಯ ಅರಣ್ಯಾಧಿಕಾರಿ ಪ್ರಪುಲ್ ಶೆಟ್ಟಿ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ವರದಿ : ದಿನೇಶ್ ಮಾಲಂಬಿ, ಶನಿವಾರಸಂತೆ)
