Advertisement
2:13 AM Saturday 2-December 2023

ಬೆಂಗಳೂರು ಚಲೋ ಹೋರಾಟದಲ್ಲಿ ಕೊಡಗಿನ ಕಾರ್ಮಿಕರು

06/02/2023

ಮಡಿಕೇರಿ ಫೆ.6 : ಕನಿಷ್ಠ ಕೂಲಿಗೆ ಆಗ್ರಹಿಸಿ ಬೆಂಗಳೂರಿನಲ್ಲಿ ಫೆ.8ರಂದು ನಡೆಯುವ ಪ್ರತಿಭಟನೆಯಲ್ಲಿ ಕೊಡಗಿನ 200ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಲಿದ್ದಾರೆ ಎಂದು ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್ (ಎಐಟಿಯುಸಿ) ಜಿಲ್ಲಾಧ್ಯಕ್ಷ ಎಚ್.ಎಂ.ಸೋಮಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕರ ಕನಿಷ್ಟ ಕೂಲಿಯನ್ನು ಕನಿಷ್ಟ ಐದು ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕೆಂಬ ನಿಯಮವಿದೆ. ಆದರೆ ಕೂಲಿ ಪರಿಷ್ಕರಣೆಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ನಡೆಸದಿರುವುದು ವಿಪರ್ಯಸ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ನಿಗಧಿ ಮಾಡಿರುವುದಕ್ಕಿಂತ ಕಡಿಮೆ ಕೂಲಿ ನೀಡಲಾಗುತ್ತಿದೆ, ಮೊದಲು ಇದ್ದ ಕನಿಷ್ಟ ಕೂಲಿಯನ್ನು ರಾಜ್ಯ ಸರ್ಕಾರ ಶೇ.10 ರಷ್ಟು ಕಡಿಮೆ ಮಾಡಿ ದರವನ್ನು ಪ್ರಕಟಿಸಿದೆ. ಕೂಲಿಯನ್ನು ನಿರ್ಧರಿಸಲು ಇರುವ ಎಲ್ಲಾ ನಿಯಮವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕನಿಷ್ಟ ಕೂಲಿಯ ಪರಿಷ್ಕರಣೆಯೇ ಬೇರೆ ಹಾಗೂ ಕನಿಷ್ಟ ಕೂಲಿ ನಿರ್ಧರಿಸುವುದೇ ಬೇರೆ ಎಂಬ ವಾದವನ್ನು ಮಂಡಿಸುತ್ತ ತನ್ನನ್ನು ತಾನು ಸಮರ್ಥಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಕನಿಷ್ಟ ಕೂಲಿ ನಿರ್ಧರಿಸುವಾಗ ಕಾನೂನಾತ್ಮಕ ಮಾರ್ಗಸೂಚಿಗಳನ್ನೇ ಅನುಸರಿಸಬೇಕು, ಕನಿಷ್ಟ ಕೂಲಿಯನ್ನು ನಿರ್ಧರಿಸುವ ಸಮಯದಲ್ಲಿ ಸಮತೂಕದ ಹಾಗೂ ಅಧಿಕ ಪೌಷ್ಟಿಕ ಆಹಾರಗಳ ಬೆಳೆಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧರಿಸಬೇಕು, ಮೊಬೈಲ್ ಜೀವನದ ಒಂದು ಅವಿಭಾಜ್ಯ ಅಂಗವಾಗಿರುವುದರಿAದ ಡಾಟಾದ ಖರ್ಚನ್ನು ಕೂಡ ಕನಿಷ್ಟ ಕೂಲಿಯಲ್ಲಿ ಒಂದು ಭಾಗದಂತೆ ಪರಿಗಣಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಯಲಿದೆ ಎಂದು ಸೋಮಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಎಐಟಿಯುಸಿ ಸೋಮವಾರಪೇಟೆ ಕಾರ್ಯದರ್ಶಿ ಹೆಚ್.ಹೆಚ್.ಗಣೇಶ್, ಸಹ ಕಾರ್ಯದರ್ಶಿ ಸುಂದರ ಹಾಗೂ ಸಲಹೆಗಾರ ಶೇಷಪ್ಪ ಉಪಸ್ಥಿತರಿದ್ದರು.