Advertisement
1:49 AM Thursday 7-December 2023

ಕಲ್ಲಕೆರೆ ಮಾದೇವಿ ಚಿತ್ರತಂಡದಿಂದ ರಾಣಿ ಮಾಚಯ್ಯರಿಗೆ ಸನ್ಮಾನ

07/02/2023

ವಿರಾಜಪೇಟೆ ಫೆ.7 : ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಕೊಡಗಿನ ಜಾನಪದ ಕಲಾವಿದೆ ಐಮುಡಿಯಂಡ ರಾಣಿ ಮಾಚಯ್ಯ ಅವರನ್ನು  ಕಲ್ಲಕೆರೆ ಮಾದೇವಿ ಚಲನಚಿತ್ರ ತಂಡದಿಂದ ಸನ್ಮಾನಿಸಲಾಯಿತು.

ಪಿ.ಅಂಡ್ ಜಿ ಕ್ರೀಯೆಷನ್, ಕಲ್ಲಕೇರೆ ಮಾದೇವಿ ಪೌರಾಣಿಕ ಕೊಡವ ಪ್ರಾದೇಶಿಕ ಭಾಷೆಯ ಚಲನಚಿತ್ರ ತಂಡವು ವಿರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಣಿ ಮಾಚಯ್ಯ ಅವರನ್ನು ಚಲನಚಿತ್ರ ತಂಡ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಚಲನಚಿತ್ರದ ವಿತರಕರು ಹಾಗೂ ಭಾ.ಜ.ಪ ಪ್ರಮುಖರಾದ ಪಟ್ಟಡ ರೀನಾ ಪ್ರಕಾಶ್ ಮಾತನಾಡಿ, ಕೊಡಗು ವಿಶಿಷ್ಟ ಸಂಸ್ಕೃತಿಗೆ ಹೆಸರುವಾಸಿಯಾಗಿದೆ, ಕಲೆ ಸಾಹಿತ್ಯ ಮತ್ತು ಸಂಸ್ಕೃತಿಗೆ ತನ್ನದೇಯಾದ ರೀತಿಯ ಕೊಡುಗೆಯನ್ನು ನೀಡಿದೆ. ದೇಶ ಸೇವೆ, ಕ್ರೀಡೆ ಮತ್ತು ಕಲೆಗೆ ರಾಜ್ಯ ಮತ್ತು ದೇಶಕ್ಕೆ ಅಪೂರ್ವವಾದ ವ್ಯಕ್ತಿಗಳನ್ನು ಕೊಡುಗೆಯಾಗಿ ನೀಡಿದೆ. ಈ ನಿಟ್ಟಿನಲ್ಲಿ ಕೊಡಗಿನ ಮಗಳಾಗಿ ಕೊಡವರ ವಿಶಿಷ್ಟ ಸಂಸ್ಕೃತಿಯ ಭಾಗವಾದ ಉಮ್ಮತ್ತಾಟ್ ನೃತ್ಯ ಕಲೆಯನ್ನು ಜೀವಂತವಾಗಿರಿಸಿ ಸಾವಿರಾರು ಮಂದಿ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ನೀಡಿ, ವಿಶ್ವಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ರಾಣಿ ಮಾಚಯ್ಯ ಅವರಿಗೆ ಸಲ್ಲುತ್ತದೆ. ಕಲೆ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಯನ್ನು ಗುರುತಿಸಿದ ಕೇಂದ್ರ ಸರ್ಕಾರವು ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದು ಕೊಡಗು ಜಿಲ್ಲೆಗೆ ಮತ್ತು ಕೊಡವ ಬಾಂಧವರಿಗೆ ಹೆಮ್ಮೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಐಮುಡಿಯಂಡ ರಾಣಿ ಮಾಚಯ್ಯ, ದಶಕದಿಂದ ಉಮ್ಮತ್ತಾಟ್ ನೃತ್ಯ ಪ್ರಕಾರವನ್ನು ವಿದ್ಯಾರ್ಥಿಗಳಿಗೆ ಕಲಿಸಿ ರಾಜ್ಯ ದೇಶ ಮತ್ತು ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದೇನೆ. ಕಲೆಯನ್ನು ಕಲಿಯಲು ಜಾತಿ ಧರ್ಮ ಮುಖ್ಯವಲ್ಲ ಆಸಕ್ತಿ ಮುಖ್ಯವಾಗಿದೆ. ಕಲೆ ಸಾಹಿತ್ಯದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದರು. ಇತರರಿಗೆ ಅಥವಾ ಮುಂದಿನ ತಲೆಮಾರಿಗೆ ಪರಿಚಯಿಸುವ ಕಾರ್ಯ ಮಾಡಿದಲ್ಲಿ ಮಾತ್ರ ಕಲೆಯನ್ನು ಉಳಿಸಬಹುದಾಗಿದೆ ಸಲಹೆ ನೀಡಿದರು.

ಹಿರಿಯರಾದ ನೆಲ್ಲಮಕ್ಕಡ ಶಂಭು ಮತ್ತು ಪ್ರಗತಿ ವಿದ್ಯಾಸಂಸ್ಥೆಯ ಸಂಸ್ಥಾಪಕರು ಮತ್ತು ವಕೀಲರಾದ ಮಾದಂಡ ಪೂವಯ್ಯ ಮಾತನಾಡಿದರು.

ವೇದಿಕೆಯಲ್ಲಿ ಚಲನಚಿತ್ರ ನಿರ್ದೇಶಕ ಬಾಳೆಯಡ ಪ್ರತೀಶ್ ಪೂವಯ್ಯ ಮತ್ತು ಆಚೇಯಡ ಗಗನ್ ಗಣಪತಿ ಹಾಜರಿದ್ದರು.

ಕಲ್ಲಕೇರೆ ಮಾದೇವಿ ಚಲನಚಿತ್ರ ತಂಡದ ಪಾತ್ರದಾರಿಗಳು, ನಿರ್ದೇಶಕರು, ತಾಂತ್ರಿಕವರ್ಗ ಸೇರಿದಂತೆ ಸಮಾಜದ ಗಣ್ಯರು ಮತ್ತು ಚಲನಚಿತ್ರ ವೀಕ್ಷಣೆ ಮಾಡಲು ಆಗಮಿಸಿದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.

ವರದಿ : ಕಿಶೋರ್ ಕುಮಾರ್ ಶೆಟ್ಟಿ