Advertisement
9:09 AM Sunday 3-December 2023

 ಗುಡುಗಳಲೆ ಜಯದೇವ ಜಾನುವಾರುಗಳ ಜಾತ್ರೆಗೆ ತೆರೆ

09/02/2023

ಶನಿವಾರಸಂತೆ ಫೆ.9 : ಸಂಸ್ಕೃತಿಯ ಮಿಲನವಾಗಿದ್ದ ಗ್ರಾಮೀಣ ಸೊಗಡಿನ ಜಾತ್ರೋತ್ಸವಗಳು  ಪ್ರಸ್ತುತ ದಿನಗಳಲ್ಲಿ  ಮೋಜು ಮಸ್ತಿ ಮಾಡುವ ಸ್ಥಳವಾಗುತ್ತಿರುವುದು ಕಳವಳಕಾರಿಯ ವಿಷಯವಾಗಿದೆ ಎಂದು ಹಾಸನ ಆದಿ ಚುಂಚನಗಿರಿ ಶಾಖಾ ಮಠದೀಶ ಶ್ರೀ ಸಂಭುನಾಥಸ್ವಾಮೀಜಿ ವಿಷಾದಿಸಿದರು.

ಗುಡುಗಳಲೆ ಜಾತ್ರಾ ಮೈದಾನದಲ್ಲಿರುವ ಶ್ರೀ ಜಯದೇವ ಜಾತ್ರಾ ಕಲಾ ವೇದಿಕೆಯಲ್ಲಿ 79ನೇ ಗುಡುಗಳಲೆ ಶ್ರೀ ಜಯದೇವ ಜಾನುವಾರುಗಳ ಜಾತ್ರೆಯ  ಸಮಾರೋಪ ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಜಾತ್ರೋತ್ಸವಗಳಂತಹ ಸಂಸ್ಕೃತಿಯನ್ನು ಕಾಪಾಡಿಕೊಂಡು ಬರುತ್ತಿದ್ದು, ಗ್ರಾಮೀಣ ಭಾಗದ ರೈತಾಪಿ ಜನರು ವರ್ಷಪೂರ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ವರ್ಷಕೊಮ್ಮೆ ರೈತರು ಜಾತ್ರೆಗಳನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಾರೆ.  ಇದು ಜನರು, ರೈತರು ಸೇರಿವ ಸಾಂಸ್ಕೃತಿಕ ವ್ಯವಸ್ಥೆಯಾಗಿತ್ತು. ಆದರೆ ಇಂದು ಜಾತ್ರೋತ್ಸವಗಳನ್ನು ಮೋಜುವಿನ ವ್ಯವಸ್ಥೆಯನ್ನಾಗಿ ಮಾರ್ಪಡಿಸಿರುವುದು ವಿಷಾದನೀಯ ಎಂದರು.

ಜಾತ್ರೆಗಳಲ್ಲಿ ಎಲ್ಲಾ ಜಾತಿ ಜನಾಂಗದವರು ಒಟ್ಟಾಗಿ ಸೇರುವ, ವೈವಿಧ್ಯತೆ, ರಥೋತ್ಸವ, ಸಂಸ್ಕೃತಿಯನ್ನು ಸಮ್ಮೀಲನಗೊಳಿಸುವ ಕೇಂದ್ರವಾಗಿದೆ. ಆದರೆ ಇಂದು ನಶಿಸುತ್ತಿರುವ ಜಾತ್ರೋತ್ಸವಗಳನ್ನು ಉಳಿಸಲು ಇಂದಿನ ಪೀಳಿಗೆ ಪ್ರಯತ್ನಿಸಿದರೆ ಮಾತ್ರ ಜಾತ್ರೆಯಂತಹ ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದರು.

ಕೊಡ್ಲಿಪೇಟೆ ಕಲ್ಲುಮಠದ ಮಹಾಂತಸ್ವಾಮೀಜಿ ಮಾತನಾಡಿ ನಾವೆಲ್ಲಾರು ವೈಜ್ಞಾನಿಕವಾಗಿ ಅಭಿವೃದ್ಧಿ ಸಾಧಿಸುತ್ತಿದ್ದರು ಆಂತರಿಕವಾಗಿ ಕುಬ್ಜರಾಗುತ್ತಿದ್ದೇವೆ. ಸೊನ್ನೆಯಿಂದ ಮನುಷ್ಯನ ಬದುಕು ಪ್ರಾರಂಭವಾಗಿ ಸೊನ್ನೆಯಲ್ಲೆ ಅಂತ್ಯ ವಾಗುವುದಕ್ಕಿಂತ ಮಧ್ಯದಲ್ಲಿರುವ  ಮನುಷ್ಯನ ಬದುಕಿನಲ್ಲಿ ಒಳ್ಳೆಯದನ್ನು ಮಾಡುವ ಮೂಲಕ ಸತ್ತ ಮೇಲೆಯೂ ಹೆಸರು ಉಳಿಸಿಕೊಳ್ಳುವಂತಹ ಕಾರ್ಯವನ್ನು ಮಾಡುವಂತೆ ಸಲಹೆ ನೀಡಿದರು.

ತಾ.ಪಂ ಮಾಜಿ ಸದಸ್ಯ ಬಿ.ಎಸ್.ಅನಂತ್‌ಕುಮಾರ್ ಮಾತನಾಡಿ ಜಾತ್ರೆಗಳಲ್ಲಿ ಎಲ್ಲಾ ಜಾತಿ, ಧರ್ಮದವರು, ಬಡವ ಶ್ರೀಮಂತ ಭೇದಭಾವ ಇಲ್ಲದೆ ಎಲ್ಲಾರು ಸೇರುತ್ತಾರೆ. ಇಂತಹ ಐಕ್ಯತೆಯನ್ನು ಸಾರುವ ಜಾತ್ರೆಯನ್ನು ಉಳಿಸಿಕೊಳ್ಳಲು ಜಾತ್ರಾ ಸಮಿತಿಯವರು ಪ್ರಯತ್ನಿಸುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಿರಿಕೊಡ್ಲಿ ಮಠದೀಶ ಸದಾಶಿವ ಸ್ವಾಮೀಜಿ, ಶನಿವಾರಸಂತೆ ಸಿ.ಐ.ನಾಗೇಶ್, ದುಂಡಳ್ಳಿ ಗ್ರಾ.ಪಂ ಅಧ್ಯಕ್ಷೆ ಪೂರ್ಣಿಮಾ ಕಿರಣ್, ಪ್ರಮುಖರಾದ ಹಾಲಪ್ಪ, ಎಸ್.ಎಂ.ಉಮಾಂಶಕರ್, ಹಂಡ್ಲಿ ಪಿಡಿಒ ಸ್ಮಿತಾ, ಮಾತನಾಡಿದರು.

ವೇದಿಕೆಯಲ್ಲಿ ಶನಿವಾರಸಂತೆ ಗ್ರಾ.ಪಂ ಅಧ್ಯಕ್ಷ ಫರ್ಜಾನ್ ಶಾಹಿದ್ ಖಾನ್, ಹಂಡ್ಲಿ ಗ್ರಾ.ಪಂ ಅಧ್ಯಕ್ಷೆ ಮಹಾದೇವಮ್ಮ, ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಂ.ವಿನಿತ್, ಕಾರ್ಯದರ್ಶಿ ಅಶೋಕ್, ಪ್ರಮುಖರಾದ ಸಂದೀಪ್, ಗ್ರಾ.ಪಂ ಸದಸ್ಯರು, ಜಾತ್ರಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

ವರದಿ : ದಿನೇಶ್ ಮಾಲಂಬಿ (ಶನಿವಾರಸಂತೆ)