Advertisement
4:09 AM Friday 8-December 2023

ರಸ್ತೆ ಅವ್ಯವಸ್ಥೆಯಿಂದ ಸಾವು, ನೋವು : ಬಲ್ಲಾರಂಡ ಮಣಿಉತ್ತಪ್ಪ ಆರೋಪ

09/02/2023

ಮಡಿಕೇರಿ ಫೆ.9 : ಮಡಿಕೇರಿ- ಚೆಟ್ಟಳ್ಳಿ- ಕತ್ತಲೆಕಾಡು ಮುಖ್ಯ ರಸ್ತೆಯ ಅವ್ಯವಸ್ಥೆಯಿಂದ ಅಪಘಾತಗಳು ಸಂಭವಿಸುತ್ತಿದ್ದು, ಸಾವಿನ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅತ್ಯಂತ ಕಡಿದಾದ ಈ ರಸ್ತೆ ಪ್ರತಿ ಮಳೆಗಾಲದಲ್ಲಿ ಕುಸಿಯುತ್ತಿದೆ, ಬರೆಗಳು ಜರಿಯುತ್ತಿದೆ. ರಸ್ತೆ ತುಂಬಾ ಹೊಂಡ ಗುಂಡಿಗಳಿವೆ. ಇದರ ನಡುವೆ ಕೇಬಲ್ ಅಳವಡಿಸಲು ಅವೈಜ್ಞಾನಿಕ ಮಾದರಿಯಲ್ಲಿ ಚರಂಡಿಗಳನ್ನು ತೋಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಬಲ್ ಅಳವಡಿಸಲು ತೋಡುವ ಅವೈಜ್ಞಾನಿಕ ಚರಂಡಿಗಳಿಂದಲೇ ಅಪಘಾತಗಳು ಸಂಭವಿಸುತ್ತಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ ಈಗಾಗಲೇ ಮೂವರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಬುಧವಾರ ಲೋಕೇಶ್ ಎಂಬುವವರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಂಬಂಧಿಸಿದ ಕೇಬಲ್ ಸಂಸ್ಥೆ ಆತನ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಜಿಲ್ಲೆಯ ಇಬ್ಬರು ಶಾಸಕರು ಹಾಗೂ ಜಿಲ್ಲಾಧಿಕಾರಿಗಳಿಗೆ ರಸ್ತೆ ಅವ್ಯವಸ್ಥೆ ಬಗ್ಗೆ ಮನವಿ ಸಲ್ಲಿಸಿ ದುರಸ್ತಿಗಾಗಿ ಒತ್ತಾಯಿಸಲಾಗಿದೆ. ರಸ್ತೆ ಅಭಿವೃದ್ಧಿಗೆ 12 ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕರು ಮಾಹಿತಿ ನೀಡಿದ್ದಾರೆ. ಆದರೆ ಕೇಬಲ್ ಅಳವಡಿಸುವ ಕಾರ್ಯದಿಂದಾಗಿ ಕಾಮಗಾರಿ ವಿಳಂಬವಾಗುತ್ತಿದೆ ಎಂದು ತಿಳಿದು ಬಂದಿದೆ. ಇನ್ನು ಮೂರು ತಿಂಗಳಿನಲ್ಲಿ ಮಳೆಗಾಲ ಆರಂಭವಾಗಲಿದೆ. ಆದ್ದರಿಂದ ಕೇಬಲ್ ಅಳವಡಿಕೆ ಮತ್ತು ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಈ ಮಳೆಗಾಲದಲ್ಲೂ ಭಾರೀ ಅನಾಹುತ ಸಂಭವಿಸುವ ಸಾಧ್ಯತೆಗಳಿದೆ ಎಂದು ಮಣಿಉತ್ತಪ್ಪ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಹೋರಾಟ ಸಮಿತಿಯ ಪದಾಧಿಕಾರಿ ಟಿ.ಎಸ್.ಧನಂಜಯ ಉಪಸ್ಥಿತರಿದ್ದರು.