ಹಿರಿಯ ರಾಜಕಾರಣಿ, ಕೊಡುಗೈ ದಾನಿ ಟಿ.ಜಾನ್ ನಿಧನ
10/02/2023

ಮಡಿಕೇರಿ ಫೆ.10 : ಹಿರಿಯ ರಾಜಕಾರಣಿ, ಕಾಂಗ್ರೆಸ್ ಮುಖಂಡ, ಕೊಡುಗೈ ದಾನಿ ಮಾಜಿ ಸಚಿವ ಟಿ.ಜಾನ್ (92) ಅವರು ಬೆಂಗಳೂರಿನ ನಿವಾಸದಲ್ಲಿ ನಿಧನರಾಗಿದ್ದಾರೆ. ಮೂಲತಃ ಕೇರಳದವರಾದ ಟಿ.ಜಾನ್, ಕೊಡಗಿಗೆ ಬಂದು ಶ್ರಮಿಕ ಜೀವಿಯಾಗಿ ದುಡಿದರು, ಉದ್ಯಮಿಯಾಗಿ ಬೆಳೆದರು. ಶಿಕ್ಷಣ ಸಂಸ್ಥೆಗಳು ಮತ್ತು ರೆಸಾರ್ಟ್ ಗಳನ್ನು ಆರಂಭಿಸಿ ಯಶಸ್ಸು ಕಂಡರು. ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದರು. ಅಬಕಾರಿ ಉದ್ಯಮದ ಮೂಲಕ ಹೆಸರು ಮಾಡಿದ್ದರು. ಕಷ್ಟ ಹೇಳಿಕೊಂಡು ಯಾರೇ ಹೋದರೂ ಸಹಾಯಹಸ್ತ ಚಾಚುತ್ತಿದ್ದ ಟಿ.ಜಾನ್ ಅವರು ಕೊಡುಗೈ ದಾನಿಯೆಂದೇ ಖ್ಯಾತರಾಗಿದ್ದರು. ಶನಿವಾರ ಬೆಂಗಳೂರಿನಲ್ಲಿ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ. ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಟಿ.ಜಾನ್ ಅಗಲಿದ್ದಾರೆ.
::: ಸಂತಾಪ :::
ಟಿ.ಜಾನ್ ಅವರ ನಿಧನಕ್ಕೆ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಜಿ.ಪೀಟರ್ ಸಂತಾಪ ಸೂಚಿಸಿದ್ದಾರೆ.
