Advertisement
2:44 AM Thursday 7-December 2023

ಮಡಿಕೇರಿ : ಅಹ್ಮದಿಯಾ ಮುಸ್ಲಿಂ ಜಮಾಅತ್ ನಿಂದ ವಿಚಾರ ಸಂಕಿರಣ : ಮನಸ್ಸು ಮನಸ್ಸುಗಳನ್ನು ಬೆಸೆಯುವ ಕಾರ್ಯದಿಂದ ಶಾಂತಿ ಸ್ಥಾಪಿಸಲು ಸಾಧ್ಯ : ಮಂಗಳೂರು ವಿವಿ ಉಪಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ

12/02/2023

ಮಡಿಕೇರಿ ಫೆ.12 : ಭಾರತ ದೇಶ ಸಾವಿರ ಕಂಬಗಳ ಮೇಲೆ ನಿಂತಿರುವ ಸುಂದರ ಚಪ್ಪರವಾಗಿದೆ, ಇಲ್ಲಿ ಮನಸ್ಸು ಮನಸ್ಸುಗಳನ್ನು ಬೆಸೆಯುವ ಕಾರ್ಯವಾಗಬೇಕು. ಆಗ ಶಾಂತಿ ನೆಲೆಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟಿದ್ದಾರೆ.
ಅಹ್ಮದಿಯಾ ಮುಸ್ಲಿಂ ಜಮಾಅತ್ ವತಿಯಿಂದ ನಗರದ ಹೊರ ವಲಯದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ “ಪರಮಾಣು ಯುದ್ಧದ ವಿನಾಶಕಾರಿ ಪರಿಣಾಮಗಳು ಮತ್ತು ಸಂಪೂರ್ಣ ನ್ಯಾಯಕ್ಕಾಗಿ ನಿರ್ಣಾಯಕ ಅಗತ್ಯ” ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ನಮ್ಮ ಧರ್ಮವನ್ನು ನಾವು ಪ್ರೀತಿಸಬೇಕು, ಹಾಗೆಯೇ ಮತ್ತೊಂದು ಧರ್ಮವನ್ನು ಗೌರವಿಸಬೇಕು. ಸ್ವಸ್ಥ ಮತ್ತು ಸ್ವಚ್ಛ ಸಮಾಜಕ್ಕಾಗಿ ಎಲ್ಲರೂ ಪ್ರಯತ್ನಿಸಬೇಕು. ಭಯೋತ್ಪಾದನೆ ಒಳ್ಳೆಯದಲ್ಲ, ಅನ್ಯಾಯದಿಂದ ಮನಸ್ಸು ಶಾಂತಿ ಪಡೆಯಲು ಸಾಧ್ಯವಿಲ್ಲ. ಭಾರೀ ಅಪಾಯವನ್ನು ಸೃಷ್ಟಿಸಬಲ್ಲ ಯುದ್ಧದ ಬಗ್ಗೆ ಯಾರೂ ಯೋಚಿಸಬಾರದು. ಪ್ರಗತಿಯ ಬಗ್ಗೆಯೇ ಚಿಂತನೆ ನಡೆಸಬೇಕು ಎಂದರು.
ಅನುಕಂಪ ವ್ಯಕ್ತಪಡಿಸುವುದಕ್ಕಿಂದ ಸೇವಾ ಮನೋಭಾವ ಪ್ರಸ್ತುತ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ. ನಾವು ನಮಗಾಗಿ ಬದುವುದಕ್ಕಿಂತ ಮತ್ತೊಬ್ಬರಿಗಾಗಿ ಅರ್ಪಿಸಿಕೊಳ್ಳುವುದು ಮುಖ್ಯ. ನಮ್ಮ ಕುಟುಂಬವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಿದರೆ ಸಮಾಜವೂ ಉತ್ತಮವಾಗಿರುತ್ತದೆ. ಕೊಟ್ಟು ತೆಗೆದುಕೊಳ್ಳುವ ಗುಣ ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಇಡೀ ವಿಶ್ವವನ್ನೇ ಕಾಡಿದ ಕೋವಿಡ್ ಸೋಂಕು ನಮಗೆಲ್ಲರಿಗೆ ಪಾಠವನ್ನು ಹೇಳಿ ಹೋಗಿದೆ. ಮನುಷ್ಯ ಪ್ರಾಣಿಗಳಿಗಿಂತ ಭಿನ್ನ ಎನ್ನುವುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಣದಿಂದ ಉತ್ತಮ ಪ್ರಜೆಯಾಗಿ ಹೊರಹೊಮ್ಮಬಹುದು, ವಿದ್ಯೆಯೊಂದಿಗೆ ಬುದ್ಧಿಯೂ ಇರಬೇಕು. ಶಾಂತಿಯುತ ಸಮಾಜವನ್ನು ಸೃಷ್ಟಿಸುವ ಹೊಣೆ ಪ್ರತಿಯೊಬ್ಬರ ಮೇಲಿದೆ. ನಿದ್ದೆಯಲ್ಲಿರುವವರನ್ನು ಬಡಿದೆಬ್ಬಿಸುವ ಕಾರ್ಯ ಆಗಬೇಕಾಗಿದೆ ಎಂದು ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.
ವಕೀಲ ಹಾಗೂ ಹಿರಿಯ ಸಾಹಿತಿ ಬಾಲಸುಬ್ರಹ್ಮಣ್ಯ ಕಂಜರ್ಪಣೆ ಮಾತನಾಡಿ ಯುದ್ಧಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ರಾಮಾಯಣ, ಮಹಾಭಾರತ ಕಾಲದಿಂದಲೂ ಯುದ್ಧಗಳು ನಡೆದುಕೊಂಡೇ ಬಂದಿದೆ. ಸೋತವರು ಸತ್ತರೆ, ಗೆದ್ದವರು ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ. ಯುದ್ಧದಿಂದಾಗುವ ಅನಾಹುತವನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದರು.
ಶಿಕ್ಷಣದಿAದ ಶಾಂತಿ ನೆಲೆಸುತ್ತದೆ ಅಥವಾ ಯುದ್ಧ ನಿಲ್ಲುತ್ತದೆ ಎಂದು ಭಾವಿಸಿದರೆ ಅದು ತಪ್ಪಾಗುತ್ತದೆ. ಯಾಕೆಂದರೆ ನ್ಯೂಕ್ಲಿಯರ್ ಬಾಂಬ್ ನ್ನು ವಿದ್ಯಾವಂತನಾಗಿರುವ ವಿಜ್ಞಾನಿಯೇ ತಯಾರಿಸುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ಶಾಂತಿ ಮಾರ್ಗದ ಬಗ್ಗೆ ಆಲೋಚಿಸಬೇಕು, ತಪ್ಪಿದಲ್ಲಿ ಡೈನೋಸರಸ್ ಎಂಬ ಪ್ರಾಣಿ ಇತ್ತೆಂದು ಸಂಗ್ರಹಾಲಯದಲ್ಲಿ ಅದರ ಅವಶೇಷಗಳನ್ನು ತೋರಿಸುವ ರೀತಿಯಲ್ಲಿ ಮುಂದೊoದು ದಿನ ಮಾನವ ಎಂಬ ಜೀವಿ ಇತ್ತು ಎಂದು ತೋರಿಸುವ ಪರಿಸ್ಥಿತಿ ಎದುರಾಗಬಹುದು ಎಂದು ಎಚ್ಚರಿಕೆಯನ್ನು ನೀಡಿದರು.
ಅರಣ್ಯವನ್ನು ಮನುಷ್ಯ ನಾಶ ಮಾಡಿತ್ತಿದ್ದಾನೆ, ವನ್ಯಜೀವಿಗಳು ನಾಡಿಗೆ ಬರುತ್ತಿವೆ. ನಾನೇ ದೊಡ್ಡವನು, ನಾನು ಈ ಭೂಮಿ ಮೇಲೆ ಶಾಶ್ವತ ಎಂಬ ಮನೋಭಾವವನ್ನು ಮಾನವ ಹೊಂದಿರುವುದರಿಂದ ಸಮಾಜದಲ್ಲಿ ಅಶಾಂತಿ ನೆಲೆಸಿದೆ. ಧರ್ಮನಿಷ್ಠೆ ಎನ್ನುವುದು ಇಂದು ಅಜ್ಞಾನದಿಂದ ಕೂಡಿದೆ, ಯಾವ ಧರ್ಮವು ಹಿಂಸೆಗೆ ಪ್ರೇರಣೆ ನೀಡುವುದಿಲ್ಲ, ಆದರೆ ಮಾನವ ಸಹಜ ದೌರ್ಬಲ್ಯ ಮತ್ತು ಅತಿಯಾದ ಆಸೆಯಿಂದ ಅಶಾಂತಿ ಮೂಡುತ್ತಿದೆ. ಯುದ್ಧ ನಡೆಯಬಾರದು ಎನ್ನುವುದು ನಮ್ಮ ಅಭಿಲಾಷೆ, ಆದರೆ ಕೆಲವು ದೇಶಗಳಿಗೆ ಯುದ್ಧ ನಡೆದರೆ ಸಂತೋಷ. ಯಾಕೆಂದರೆ ಶಸ್ತಾçಸ್ತçಗಳ ಮಾರಾಟ ವ್ಯವಹಾರದಲ್ಲಿ ಹೆಚ್ಚು ಲಾಭ ಗಳಿಸಬಹುದೆನ್ನುವ ಸ್ವಾರ್ಥ ಅಡಗಿರುತ್ತದೆ ಎಂದು ಬಾಲಸುಬ್ರಹ್ಮಣ್ಯ ಕಂಜರ್ಪಣೆ ಬೇಸರ ವ್ಯಕ್ತಪಡಿಸಿದರು.
ಸಿಆರ್‌ಪಿಎಫ್ ನ ನಿವೃತ್ತ ಪೊಲೀಸ್ ಅಧಿಕಾರಿ ಕೆ.ಆರ್ಕೇಶ್ ಮಾತನಾಡಿ ಇತ್ತೀಚಿನ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ವಿಶ್ವ ಇನ್ನೆಷ್ಟು ದಿನ ಉಳಿಯಬಹುದು ಎನ್ನುವ ಆತಂಕ ಸೃಷ್ಟಿಯಾಗುತ್ತಿದೆ. ಚೀನಾ ವಿಶ್ವದ ದೊಡ್ಡ ಶಕ್ತಿಯಾಗಲು ಹವಣಿಸುತ್ತಿದೆ, ಅಮೆರಿಕಾದ ಮೇಲೆ ಬಲೂನ್ ಹಾರಿ ಬಿಡುವ ಮೂಲಕ ರಕ್ಷಣಾ ಕ್ಷೇತ್ರದ ಮೇಲೆ ಕಣ್ಣಿಡುವ ಪ್ರಯತ್ನ ಮಾಡಿದೆ. ನ್ಯೂಕ್ಲಿಯರ್ ಯಾರಿಂದ ಸ್ಫೋಟವಾಗುತ್ತದೆ ಎನ್ನುವ ಭಯ ಮೂಡಿದೆ ಎಂದು ಗಮನ ಸೆಳೆದರು.
ಈ ಹಿಂದೆಯೂ ಯುದ್ಧಗಳಾಗಿದೆ, ಅದರೆ ಯುದ್ಧದಲ್ಲಿ ಹೋರಾಡಿ ಮಡಿದವರೆಲ್ಲರೂ ಬಿಟ್ಟು ಹೋಗಿರುವ ಏಕೈಕ ಸಂದೇಶ ಶಾಂತಿ. “ಎಲ್ಲರನ್ನೂ ಪ್ರೀತಿಸಿ, ಯಾರನ್ನೂ ದ್ವೇಷಿಸಬೇಡಿ” ಎನ್ನುವ ಹಿತನುಡಿ ನೆನ್ನೆಗು, ಇಂದಿಗೂ ಮತ್ತು ನಾಳೆಗೂ ಪ್ರಸ್ತುತವೆನಿಸುತ್ತದೆ. ಒಂದು ದೇಶದ ಪ್ರಗತಿಗೆ ಶಾಂತಿ ಮುಖ್ಯವಾಗಿದೆ, ಪಾಕಿಸ್ತಾನ, ಅಪಘಾನಿಸ್ತಾನ ಮತ್ತು ಶ್ರೀಲಂಕಾ ಇಂದು ಪ್ರಗತಿಯಲ್ಲಿ ಹಿಂದುಳಿಯಲು ಪ್ರಮುಖ ಕಾರಣ ಅಲ್ಲಿ ನೆಲೆಸಿರುವ ಅಶಾಂತಿ ಎಂದು ಅಭಿಪ್ರಾಯಪಟ್ಟರು.
ಬ್ರೈನೋಬ್ರೇನ್ ಮಡಿಕೇರಿ ಕೇಂದ್ರದ ಮುಖ್ಯಸ್ಥೆ ಎಂ.ಕವಿತಾ ಕರುಂಬಯ್ಯ ಅವರು ಮಾತನಾಡಿ ಇಂದಿನ ಮಕ್ಕಳಿಗೆ ಮುಂದೆ ಶಾಂತಿಯುತ ವಿಶ್ವವನ್ನು ಕೊಡುಗೆಯಾಗಿ ನೀಡಬೇಕಾದರೆ ಉತ್ತಮ ಶಿಕ್ಷಣವನ್ನು ನೀಡುವ ಅಗತ್ಯವಿದೆ ಎಂದರು.
ಮಕ್ಕಳಿಗೆ ಮನೆ ಮೊದಲ ಪಾಠ ಶಾಲೆಯಾಗಿರಬೇಕು, ಶಾಂತಿ ಮತ್ತು ಶಿಸ್ತು ಇಲ್ಲಿಂದಲೇ ಆರಂಭವಾಗಬೇಕು. ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ದೊಡ್ಡ ಜವಾಬ್ದಾರಿ ಪೋಷಕರ ಮೇಲಿದೆ. ಮಕ್ಕಳು ವೈದ್ಯರೇ ಆಗಬೇಕು ಅಥವಾ ಇಂಜಿನಿಯರ್ ಆಗಬೇಕು ಎನ್ನುವ ಕಲ್ಪನೆಯಲ್ಲೇ ಒತ್ತಡವನ್ನು ಹೇರಬಾರದು. ಮಕ್ಕಳ ಆಸಕ್ತಿಯ ವಿಷಯಕ್ಕೆ ಪ್ರೋತ್ಸಾಹ ನೀಡಬೇಕು ಮತ್ತು ಮೌಲ್ಯವನ್ನು ವೃದ್ಧಿಸಬೇಕು. ಉತ್ತಮ ಸಮಾಜದ ಬಗ್ಗೆ ವಿಶ್ವಾಸವನ್ನು ತುಂಬುವುದರೊಂದಿಗೆ ಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಬೆಳವಣಿಗೆ ಹೊಂದುವAತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಹ್ಮದಿಯಾ ಮುಸ್ಲಿಂ ಜಮಾಅತ್ ನ ಮಿಷನರಿ ಎಸ್.ಬಿ.ಹುಸಾಮ್ ಅಹ್ಮದ್ ಸಾಹಿಬ್ ಮಾತನಾಡಿ ಸಮಾಜದಲ್ಲಿ ನ್ಯಾಯಪಾಲನೆಯಿಂದ ಮಾತ್ರ ಶಾಂತಿ ನೆಲೆಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಯಾರೂ ಹಾದಿ ತಪ್ಪಬಾರದು, ದುಶ್ಚಟಗಳಿಗೆ ದಾಸರಾಗಬಾರದು, ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು. ನ್ಯಾಯಪಾಲನೆಯನ್ನು ಜೀವನದ ಮುಖ್ಯ ಗುರಿಯಾಗಿಸಿಕೊಳ್ಳಬೇಕು. ಇಂದು ರಾಜಕೀಯ ಮತ್ತು ಆರ್ಥಿಕ ಸಮಸ್ಯೆಗಳು ಯುದ್ಧಕ್ಕೆ ಕಾರಣವಾಗುತ್ತಿದೆ. ಯುದ್ಧದ ಮೂಲಕ ನಮ್ಮ ಮುಂದಿನ ಪೀಳಿಗೆ ಅಂಗವೈಕಲ್ಯ ಆಗುವುದನ್ನು ತಪ್ಪಿಸಬೇಕಾಗಿದೆ. ದೇಶದ ದ್ರೋಹದ ಕೆಲಸ ಶಾಂತಿ ಮತ್ತು ಭದ್ರತೆಗೆ ಅಪಾಯಕಾರಿಯಾಗಿದೆ. ಸತ್ಯ ಮತ್ತು ನ್ಯಾಯಪಾಲನೆಯ ವಾತಾವರಣವನ್ನು ಸೃಷ್ಟಿಸುವ ಮೂಲಕ ಶಾಂತಿ ಸ್ಥಾಪನೆಗೆ ಪಣತೊಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಹ್ಮದೀಯ ಮುಸ್ಲಿಂ ಜಮಾಅತ್ ನ ಮಡಿಕೇರಿ ಅಧ್ಯಕ್ಷ ಜಿ.ಎಂ.ಮೊಹಮ್ಮದ್ ಷರೀಫ್ ವಿಶ್ವ ಇಂದು ಪ್ರಕ್ಷುಬ್ಧ ವಾತಾವರಣದಲ್ಲಿದೆ. ಶಾಶ್ವತ ಶಾಂತಿ ಮತ್ತು ಸೌಹಾರ್ದತೆ ಸ್ಥಾಪಿಸಲು ಪ್ರೇರಣೆ ನೀಡುವಂತಹ ಕಾರ್ಯಕ್ರಮಗಳನ್ನು ವಿಶ್ವದೆಲ್ಲೆಡೆ ಮುಸ್ಲಿಂ ಜಮಾಅತ್ ನಡೆಸಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜಾಗೃತಿ ಕಾರ್ಯಕ್ರಮಗಳು ಮಡಿಕೇರಿಯಲ್ಲಿ ನಡೆಯಲಿದೆ ಎಂದರು.
ಶಾಶ್ವತ ಶಾಂತಿಯನ್ನು ನೆಲೆಗೊಳಿಸಲು ಜಮಾಅತ್ ವಿಶ್ವದ ನಾಯಕರುಗಳಿಗೆ 10 ಸೂತ್ರದ ಸಲಹೆಗಳನ್ನು ನೀಡಿದೆ. ದೇವರನ್ನು ಅರಿತುಕೊಳ್ಳಬೇಕು, ನ್ಯಾಯಪಾಲನೆಗೆ ಆದ್ಯತೆ ನೀಡಬೇಕು, ಆರ್ಥಿಕ ಸಮಾನತೆ ಮತ್ತು ಬಡತನ ನಿರ್ಮೂಲನೆ, ಆಣ್ವಸ್ತ್ರ ಮುಕ್ತ ವಾತಾವರಣ ಸೃಷ್ಟಿ, ದೇಶದ ಏಳಿಗೆಗೆ ಆದ್ಯತೆ, ಉಗ್ರವಾದ ತಿರಸ್ಕಾರ, ಮಾನವಕುಲ ಸೇವೆ, ಪರಧರ್ಮ ಗೌರವ, ಈ ಸೂತ್ರಗಳ ಪಾಲನೆಯಿಂದ ಶಾಂತಿ ನೆಲೆಸಲು ಸಾಧ್ಯ ಎನ್ನುವ ವಿಶ್ವಾಸವನ್ನು ನಾವು ಹೊಂದಿದ್ದೇವೆ.
ಅಣ್ವಸ್ತ್ರ ಬಳಕೆಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ವಿಶ್ವದ ಎಲ್ಲಾ ದೇಶಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಜಮಾಅತ್ ಮಾಡುತ್ತಿದೆ. ಭಾರತ ಸರ್ಕಾರ ಕೂಡ ವಿಶ್ವ ಸಂಸ್ಥೆಯಲ್ಲಿ ಈ ಬಗ್ಗೆ ಗಮನ ಸೆಳೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಇದನ್ನು ಮಂಡಿಸಲಿದೆ ಎನ್ನುವ ವಿಶ್ವಾಸವಿದೆ ಎಂದು ಮೊಹಮ್ಮದ್ ಷರೀಫ್ ಹೇಳಿದರು.
ನಿವೃತ್ತ ಏರ್‌ಮಾರ್ಷಲ್ ಕೆ.ಸಿ.ನಂದ ಕಾರ್ಯಪ್ಪ ಮಾತನಾಡಿ ಯುದ್ಧ ಮತ್ತು ಅಣ್ವಸ್ತ್ರ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಿದರು.
ಅಹ್ಮದಿಯಾ ಮುಸ್ಲಿಂ ಜಮಾಅತ್ ನ ಮಿಷನರಿ ಮೊಹಮ್ಮದ್ ಕಲೀಂ ಖಾನ್ ಸಾಹಿಬ್ ಮಾತನಾಡಿ ಸಂಸ್ಥೆ ನಡೆದು ಬಂದ ಹಾದಿಯನ್ನು ವಿವರಿಸಿದರು.
ಜಮಾಅತ್ ನ ಕೆ.ಎಂ.ಇಬ್ರಾಹಿಂ, ಯೂಸುಫ್ ಹಾಗೂ ಸಫಲ್ ಅಹಮ್ಮದ್ ಮಾತನಾಡಿದರು.
ವಿಶ್ವ ಶಾಂತಿಯ ಕುರಿತಾದ ಪುಸ್ತಕಗಳ ಪರಿಚಯವನ್ನು ಮಾಡಲಾಯಿತು ಮತ್ತು ಅಹ್ಮದಿಯಾ ಮುಸ್ಲಿಂ ಜಮಾಅತ್ ಕಾರ್ಯವೈಖರಿಯ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
ಸಭೆಯ ಆರಂಭದಲ್ಲಿ ರಾಷ್ಟçಗೀತೆ ಹಾಡಲಾಯಿತು, ಕೊನೆಯಲ್ಲಿ ವಿಶ್ವ ಶಾಂತಿಗಾಗಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. ಸರ್ವಧರ್ಮೀಯರು ಹಾಗೂ ಎಲ್ಲಾ ಕ್ಷೇತ್ರದ ಪ್ರಮುಖರು ಪಾಲ್ಗೊಂಡಿದ್ದ ಕಾರ್ಯಕ್ರಮ ಅಚ್ಚುಕಟ್ಟುತನ ಮತ್ತು ಮೌಲ್ಯಯುತ ವಿಚಾರ ವಿನಿಮಯದೊಂದಿಗೆ ಗಮನ ಸೆಳೆಯಿತು.