Advertisement
11:57 AM Monday 4-December 2023

ವಿರಾಜಪೇಟೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆ : ಗುಣಮಟ್ಟದ ಚಿಕಿತ್ಸೆ ನೀಡಲು ಶಾಸಕ ಕೆ.ಜಿ.ಬೋಪಯ್ಯ ಸೂಚನೆ

13/02/2023

ವಿರಾಜಪೇಟೆ ಫೆ.13 : ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು ಸೇರಿದಂತೆ ಕೇವಲ ರೋಗಿಗಳನ್ನಷ್ಟೇ ಅಲ್ಲ ಚಿಕಿತ್ಸಾಲಯಗಳು ಕೂಡ ಜೀವಂತವಾಗಿರಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯಪಟ್ಟರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಕೆ.ಜಿ. ಬೋಪಯ್ಯ ಅವರು ವೈದ್ಯರನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಸರ್ಕಾರಿ ಆಸ್ಪತ್ರೆಗಳಿಗೆ ಬರುವಂತಹ ಬಹುತೇಕರು ಬಡಕುಟುಂಬದ ಹಿನ್ನೆಲೆಯುಳ್ಳವರಾಗಿದ್ದು, ಅಂತಹವರಿಗೆ ಸೂಕ್ತ ಚಿಕಿತ್ಸೆ ನೀಡುವ ವಿಷಯದಲ್ಲಿ ಧನಾತ್ಮಕ ಚಿಂತನೆಗಳು ವೈದ್ಯರಿಂದಾಗಬೇಕಾಗಿದೆ, ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸದ್ಯಕ್ಕೆ ಎಲ್ಲಾ ಸೌಲಭ್ಯಗಳು ಲಭ್ಯವಿದ್ದು, ಶುಚಿತ್ವ ಕಾಪಾಡಿಕೊಳ್ಳಲಾಗಿದೆ ಎಂದರು.
ಸರ್ಕಾರಿ ಆಸ್ಪತ್ರೆಗಳಿಗೆ ಬರುವಂತಹ ಬಹುತೇಕ ರೋಗಿಗಳು ಹಣಕಾಸಿನ ತೊಂದರೆಯನ್ನು ಅನುಭವಿಸುವಂತಹವರೇ. ಹೆಚ್ಚು ಆರ್ಥಿಕ ತೊಂದರೆಯಿಂದ ಬಳಲುವವರಿಗಾಗಿಯೇ ಸರ್ಕಾರಿ ಆಸ್ಪತ್ರೆಗಳು ಎನ್ನುವಂತಾಗಿದೆ. ಸರ್ಕಾರವೂ ಕೂಡ ಸಕಲ ರೀತಿಯ ಸೌಲಭ್ಯಗಳನ್ನು ಸರ್ಕಾರಿ ಆಸ್ಪತ್ರೆಗಳಿಗೆ ಒದಗಿಸಲಾಗುತ್ತಿದ್ದು, ಅವುಗಳನ್ನು ರೋಗಿಗಳಿಗೆ ತಲುಪಿಸುವ ಕಾರ್ಯವನ್ನು ವೈದ್ಯಕೀಯ ಸಿಬ್ಬಂದಿಗಳು ಮಾಡುತ್ತಿದ್ದಾರೆ ಎಂದರು.
ಮಲ್ಟಿ ಸ್ಪೆಶಾಲಿಟಿ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲವೆನ್ನುವ ರೀತಿಯಲ್ಲಿ ಶುಚಿತ್ವ ಕಾಪಾಡಿಕೊಳ್ಳಲಾಗಿದ್ದು ರಕ್ತತಪಾಸಣೆ, ಎಕ್ಸ್‍ರೇ, ಡಯಾಲಿಸಿಸ್, ಆಪರೇಶನ ಥೇಟರ್ ಸೇರಿದಂತೆ ನಾಯಿ ಮತ್ತು ಹಾವು ಕಡಿತಕ್ಕೆ ಚಿಕಿತ್ಸಾ ಸೌಲಭ್ಯಗಳನ್ನು ಇಲ್ಲಿ ನೀಡಲಾಗುತ್ತಿದೆ. ಆಸ್ಪತ್ರೆಯಲ್ಲಿ ಗಂಟಲು-ಕಿವಿ, ಎಲುಬು-ಕೀಲು, ಚರ್ಮ, ನೇತ್ರ, ಮಕ್ಕಳು ಮತ್ತು ಮಹಿಳೆಯರಿಗೆ, ಆಯುಷ್ಯ ಜನರಲ್ ಫಿಸಿಶಿಯನ್ ಇನ್ನಿತರ ರೋಗಗಳಿಗೆ ತಜ್ಞ ವೈದ್ಯರುಗಳು ಲಭ್ಯವಿದ್ದು, ಇದೊಂದು ಸಕಲ ಸೌಲಭ್ಯಗಳಿರುವ ಸರ್ಕಾರಿ ಆಸ್ಪತ್ರೆಯಾಗಿದ್ದು ತಾಲೂಕಿನ ಎಲ್ಲ ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಮುಖ್ಯ ಆಡಳಿತ ವೈದ್ಯಾಧಿಕಾರಿ ಜೆ.ಶ್ರೀನಿವಾಸ್ ಮಾತನಾಡಿ, ಆಸ್ಪತ್ರೆಯ ಅಬಿವೃದ್ಧಿ ಬಗ್ಗೆ ಮಾಹಿತಿ ನೀಡಿದರು. ಬಳಿಕ ಮಾತನಾಡಿದ ಅವರು ಹೊರ ರೋಗಿಗಳಿಗೆ ಸಂದರ್ಶನ ಶುಲ್ಕ ಹತ್ತು ರೂಪಾಯಿ ಹೇರಿಕೆ ಮಾಡುವಂತೆ ಕೋರಿ ಕೊಂಡ ಹಿನ್ನೆಲೆಯಲ್ಲಿ ಶಾಸಕ ಬೋಪಯ್ಯ ಮತ್ತು ವಿಧಾನ ಪರಿಷತ್ತ್ ಸದಸ್ಯರಾದ ಸುಜಾ ಕುಶಾಲಪ್ಪ ಸಮ್ಮತಿ ಸೂಚಿಸಿದರು.
ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆಯಲ್ಲಿ ಕೆಲವರು ದರ್ಪದಿಂದ ಮತ್ತು ವೈದ್ಯರನ್ನು ಅವಹೇಳನ ಮಾಡುವುದು, ಹೆದರಿಸುವುದು, ಆಸ್ಪತ್ರೆ ಒಳಗೆ ನುಗ್ಗಿ ದಾಂದಲೆ ನಡೆಸುವುದು, ಗಲಾಟೆ ಮಾಡುವುದು, ಆಸ್ಪತ್ರೆಯ ಉಪಕರಣಗಳಿಗೆ ಹಾನಿಮಾಡುವುದು ಜಾಸ್ತಿಯಾಗಿದೆ ಎಂದು ಶಾಸಕರ ಗಮನಕ್ಕೆ ತಂದರು.
ಸಭೆಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದರೂ ಕೂಡ ಯಾರು ಸಭೆಗೆ ಆಗಮಿಸಲಿರಲಿಲ್ಲ. ಇದಕ್ಕೆ ಶಾಸಕರು ಪೊಲೀಸ್ ಇಲಾಖೆಯ ಯಾವುದೇ ಅಧಿಕಾರಿಗಳು ಸಭೆಗೆ ಆಗಮಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ರಾತ್ರಿ ಪಾಳಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಪೇದೆಗಳು ಏಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದರು.
ಪ್ರತಿದಿನವೂ ರಾತ್ರಿ ವೇಳೆಯಲ್ಲಿ ಆಸ್ಪತ್ರೆ ಬಳಿ ಗಸ್ತು ಬರಲು ಡಿವೈಎಸ್‍ಪಿ ಬಳಿ ಚರ್ಚಿಸುತ್ತೇನೆ. ರಾತ್ರಿ ಪಾಳಯದಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಪುರುಷ ವಾಚ್ ಮ್ಯಾನ್ ಕೊಡಿಸಲು ಹಾಗೂ ಎರಡು ವೈದ್ಯರ ಕೊರತೆ ಮತ್ತು ಆಸ್ಪತ್ರೆಗೆ ಅಗತ್ಯವಾದ ಎಲ್ಲ ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಮಾಡುವುದಾಗಿ ಹೇಳಿದರಲ್ಲದೆ ಇತ್ತೀಚೆಗೆ ಬಂದ ಮುಖ್ಯ ಆಡಳಿತ ವೈದ್ಯಾಧಿಕಾರಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು.
ಈ ಹಿಂದೆ ಆಸ್ಪತ್ರೆ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದ ಎರಡನೇ ದರ್ಜೆ ಮಹಿಳಾ ನೌಕರರೊಬ್ಬರು ಕೆಲವು ಸಂಸ್ಥೆಗಳಿಗೆ ಹಾಗೂ ಆಸ್ಪತ್ರೆಗೆ ಸಾಮಾಗ್ರಿಗಳನ್ನು ಖರೀದಿಸಿ ಹಣವನ್ನು ನೀಡದೆ ಅನೇಕ ಮಂದಿಗೆ ಹಣ ನೀಡದೆ ವಂಚನೆ ಮಾಡಿರುವುದಾಗಿ, ಈ ಹಿಂದೆ ಕೂಡ ಇತರ ಎರಡು ಕಡೆಗಳಲ್ಲಿ ಇದೇ ರೀತಿ ವಂಚನೆ ಮಾಡಿ ಅಮಾನತ್ತುಗೊಂಡಿದ್ದರು. ಮತ್ತೆ ಇದೇ ಕೆಲಸ ಇಲ್ಲಿಯೂ ಮಾಡಿದ್ದಾರೆಂದು ಇರುವ ಬಗ್ಗೆ ಸಭೆಯ ಗಮನಕ್ಕೆ ತರಲಾಯಿತು. ಶಾಸಕರು ತಕ್ಷಣವೇ ಲೆಕ್ಕ ಪರಿಶೋದನೆ ಮಾಡಿ ಯಾರು ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಅವರಿಂದ ಹಣ ಕೊಡಿಸಲು ಕ್ರಮವನ್ನು ಕೈಗೊಳ್ಳಿ ಎಂದು ಮುಖ್ಯ ಆಡಳಿತ ವೈದ್ಯರಿಗೆ ತಿಳಿಸಿದರು.
ವಂಚನೆಗೊಳಗಾದವರು ಸಭೆಯ ಗಮನಕ್ಕೆ ತಂದಾಗ ಶಾಸಕರು ಕಳೆದ ಮೂರು ವರ್ಷಗಳ ಬ್ಯಾಂಕ್ ಇತಿಹಾಸ ತೆಗೆದು ನಂತರ ಕ್ರಮವನ್ನು ಕೈಗೊಳ್ಳಿ ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ಪುರುಷ ಡಿ ಗ್ರೂಪ್‍ನ ಸದಸ್ಯರ ಕೊರತೆ ಬಗ್ಗೆ ಸಭೆಯ ಗಮನಕ್ಕೆ ತಂದಾಗ, ಶಾಸಕರು ಉತ್ತಮ ವ್ಯಕ್ತಿಗಳನ್ನು ಆಯ್ಕೆ ಮಾಡುವಂತೆ ಸೂಚಿಸಿದರು.
ವಿಧಾನ ಪರಿಷತ್ತ್ ಸದಸ್ಯ ಸುಜಾ ಕುಶಲಪ್ಪ ಎಲ್ಲಾ ವೈದ್ಯರನ್ನು ಕರೆಯಿಸಿ ಸಭೆ ನಡೆಸಿ ವೈದ್ಯರು ಬಳಿ ತಮ್ಮ ಅಹವಾಲು ಕೇಳಿದಾಗ ವೈದ್ಯರಾದ ಪ್ರಜ್ವಲ್ ಅವರು ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಇದ್ದ ಉಪಕರಣ ರೀಪೇರಿಯಾಗಿದ್ದು ಅದರಿಂದ ಶಸ್ತ್ರಚಿಕಿತ್ಸೆ ಮಾಡಲು ತೊಂದರೆಯಾಗುತ್ತಿದೆ ಎಂದು ತಿಳಿಸಿದರು,
ನೇತ್ರ ತಜ್ಞ ವೈದ್ಯರಾದ ಹೇಮಪ್ರಿಯ ಮಾತನಾಡಿ ತಾನು ಕೆಲಸ ನಿರ್ವಹಿಸುವ ಕೋಣೆಯಲ್ಲಿ ವ್ಯಕ್ತಿಯೊಬ್ಬ ನುಗ್ಗಿ ತಾನು ಉಪಯೋಗಿಸುವ ಎಲ್ಲಾ ಪರಿಕರಗಳನ್ನು ನಾಶ ಮಾಡಿದ್ದಾನೆ ಎಂದು ಸುಜಾಕುಶಾಲಪ್ಪ ಅವರ ಗಮನಕ್ಕೆ ತಂದರು. ಅದಕ್ಕೆ ಶಾಸಕರು ಯಾವ ಪರಿಕರಗಳು ಅವಶ್ಯಕತೆ ಇದೆ ಅದರ ಬಗ್ಗೆ ಮಾಹಿತಿ ಕೊಡಿ. ಆರೋಗ್ಯ ಮಂತ್ರಿಗಳ ಮಾತನಾಡಿ ಉಪಕರಣದ ವ್ಯವಸ್ಥೆ ಮಾಡುವುದಾಗಿ, ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡಲು ವೈದ್ಯರನ್ನು ನೇಮಿಸಲು ಕ್ರಮವನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಸಭೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಪುರಸಭೆ ಮುಖ್ಯಾಧಿಕಾರಿ ಎ. ಚಂದ್ರಕುಮಾರ್, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಚೆಸ್ಕಾಂ ಅಧಿಕಾರಿಗಳು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಆಸ್ಪತ್ರೆಯ ಎಲ್ಲ ವೈಧ್ಯರುಗಳು ಸಿಬ್ಬಂದಿಗಳು ಹಾಜರಿದ್ದರು.