Advertisement
3:20 AM Friday 8-December 2023

2 ಮಾನವ ಜೀವ ಬಲಿ ಪಡೆದ ಹುಲಿ ಸೆರೆಗೆ ಕಾರ್ಯಾಚರಣೆ : 100 ಸಿಬ್ಬಂದಿಗಳ ತಂಡ ರಚನೆ

13/02/2023

ಮಡಿಕೇರಿ ಫೆ.13 : ಪೊನ್ನಂಪೇಟೆ ವ್ಯಾಪ್ತಿಯ ಬಾಡಗ ಗ್ರಾಮದಲ್ಲಿ ಕಳೆದ 18 ಗಂಟೆಗಳಲ್ಲಿ ಒಂದೇ ಕುಟುಂಬದ ಎರಡು ಮಾನವ ಜೀವಗಳು ಹುಲಿದಾಳಿಗೆ ಬಲಿಯಾಗಿವೆ. ದಕ್ಷಿಣ ಕೊಡಗಿನಲ್ಲಿ ಆತಂಕ ಮನೆ ಮಾಡಿದ್ದು, ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾನುವಾರ ಸಂಜೆ ಮಧು ಹಾಗೂ ವೀಣಾ ದಂಪತಿಯ ಪುತ್ರ ಚೇತನ್ (18) ಎಂಬ ಯುವಕನ ಮೇಲೆ ಹುಲಿ ದಾಳಿ ಮಾಡಿ ಕೊಂದು ಹಾಕಿತ್ತು. ಈ ಘಟನೆ ಮಾಸುವ ಮುನ್ನವೇ ಲೈನ್ ಮನೆಯ ನಿವಾಸಿ ಪಲ್ಲೇರಿಯ ರಾಜು(75) ಎಂಬುವವರನ್ನು ಹುಲಿ ಇಂದು ಬಲಿ ಪಡೆದಿದೆ. ಅಲ್ಲದೆ ಚೇತನ್ ನ್ನು ಹುಡುಕಿಕೊಂಡು ಹೋದ ಆತನ ತಂದೆ ಮಧು ಮೇಲೆಯೂ ಹುಲಿದಾಳಿ ಮಾಡಿ ಗಾಯಗೊಳಿಸಿದೆ.
ಸೋಮವಾರ ಬೆಳಗ್ಗೆ 7 ಗಂಟೆಯ ಸುಮಾರಿನಲ್ಲ್ಲಿ ರಾಜು ಅವರು ತಮ್ಮ ಲೈನ್ ಮನೆಯಿಂದ ಅನತಿ ದೂರ ಸಾಗುತ್ತಿದ್ದ ಸಂದರ್ಭ ತೋಟದಲ್ಲಿದ್ದ ಹುಲಿ ದಿಢೀರ್ ದಾಳಿ ಮಾಡಿದೆ. ತಲೆಯ ಭಾಗಕ್ಕೆ ಹುಲಿ ಕಚ್ಚಿದ್ದು, ರಾಜು ಹಾಗೂ ಮನೆ ಮಂದಿ ಕಿರುಚಿಕೊಂಡಾಗ ಹುಲಿ ಕಾಫಿ ತೋಟದೊಳಗೆ ಮರೆಯಾಗಿದೆ. ಆದರೆ ರಾಜು ಸ್ಥಳದಲ್ಲೇ ಮೃತಪಟ್ಟರು.
::: ತೀವ್ರ ಅಸಮಾಧಾನ :::
ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಹುಲಿ ದಾಳಿ ನಿರಂತರವಾಗಿದ್ದು, ಇಲ್ಲಿಯವರೆಗೆ ಜಾನುವಾರುಗಳನ್ನು ಬಲಿ ಪಡೆಯುತ್ತಿತ್ತು. ಇದೀಗ ನೇರವಾಗಿ ಮಾನವನ ಮೇಲೆ ದಾಳಿ ಮಾಡಿದೆ. ಭಾನುವಾರ ರಾತ್ರಿ ಚೇತನ್ ಮೇಲೆ ಹುಲಿದಾಳಿ ಮಾಡಿದಾಗ ಗ್ರಾಮಸ್ಥರು, ಕಾಫಿ ಬೆಳೆಗಾರರು ಹಾಗೂ ರೈತ ಸಂಘದ ಪ್ರಮುಖರು ಜಮಾಯಿಸಿ ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
ಸೋಮವಾರ ಮತ್ತೆ ವೃದ್ಧ ರಾಜು ಅವರನ್ನು ಹುಲಿ ಬಲಿ ಪಡೆದ ನಂತರವಂತು ಸ್ಥಳೀಯರ ಅಸಮಾಧಾನ ತೀವ್ರಗೊಂಡಿತ್ತು. ಹುಲಿಗೆ ಗುಂಡಿಕ್ಕುವಂತೆ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚೆಮ್ಮಟ್ಟಿರ ಪ್ರವೀಣ್ ಉತ್ತಪ್ಪ ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದರು. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಹಾಗೂ ಹೈಕೋರ್ಟ್ ವಕೀಲ ಎ.ಎಸ್.ಪೊನ್ನಣ್ಣ, ಭಾನುವಾರ ದಿನ ಮೃತಪಟ್ಟ ಯುವಕ ಚೇತನ್ ಎಂಬುವವರ ತಂದೆ ಮಧು ಅವರ ಮೇಲೂ ಹುಲಿ ದಾಳಿ ನಡೆಸಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲು ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅರಣ್ಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು, ಅಧಿಕಾರಿಗಳ ತಲೆ ದಂಡವಾಗಬೇಕೆಂದು ಪೊನ್ನಣ್ಣ ಹೇಳಿದರು.
::: ಅಧಿಕಾರಿಗಳಿಗೆ ಘೇರಾವ್ :::
ಘಟನಾ ಸ್ಥಳಕ್ಕೆ ಹಿರಿಯ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡದೆ ಹೋದಲ್ಲಿ ಮೃತದೇಹವನ್ನು ಕೊಂಡೊಯ್ಯಲು ಬಿಡುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು. ಸ್ಥಳಕ್ಕೆ ಡಿಎಫ್‍ಓ ಎ.ಟಿ.ಪೂವಯ್ಯ, ಸಿಸಿಎಫ್ ನಿರಂಜನ್ ಮೂರ್ತಿ, ನಾಗರಹೊಳೆ ಅಭಯಾರಣ್ಯದ ಆರ್‍ಎಫ್‍ಓ ಮೊಹಮದ್ ಜಶಾನ್, ಇತರ ಅರಣ್ಯ ಇಲಾಖೆ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಹಾಗೂ ಅಡಿಷನಲ್ ಎಸ್.ಪಿ. ಸುಂದರ್ ರಾಜ್ ಅವರುಗಳು ತೆರಳಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಅಧಿಕಾರಿಗಳಿಗೆ ಘೇರಾವ್ ಹಾಕಿದ ಪ್ರತಿಭಟನಾಕಾರರು, ಧಿಕ್ಕಾರದ ಘೋಷಣೆಗಳನ್ನು ಕೂಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಭಾನುವಾರ ದಿನ ಮಾನವ ಜೀವ ಬಲಿ ನಡೆದ ಸಂದರ್ಭವೇ ಹುಲಿ ಸೆರೆಗೆ ಕಾರ್ಯಾಚರಣೆ ಏಕೆ ನಡೆಸಲಿಲ್ಲ, ಸ್ಥಳದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸಲು ವಿಫಲವಾಗಿದ್ದೇ ಮತ್ತೊಂದು ಜೀವ ಬಲಿಗೆ ಕಾರಣವಾಗಿದೆ. ಈ ಘಟನೆಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ನೇರ ಕಾರಣ ಎಂದು ಆರೋಪಿಸಿದರು.
ಎಸಿಎಫ್ ಹಾಗೂ ಆರ್‍ಎಫ್‍ಓ ವಿರುದ್ಧ ಎಫ್‍ಐಆರ್ ದಾಖಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
::: 25 ಹುಲಿ ಸೆರೆಗೆ ಕ್ರಮ :::
ನಾಗರಹೊಳೆ ವ್ಯಾಪ್ತಿಯಲ್ಲಿ ಹುಲಿಗಳ ಸಂಖ್ಯೆ ಮಿತಿ ಮೀರಿದೆ. 2 ಕಿ.ಮೀ ಗೆ 1 ರಂತೆ ಹುಲಿಗಳ ಸಂಖ್ಯೆ ಏರಿಕೆಯಾಗಿರುವುದೇ ಸಮಸ್ಯೆಗೆ ಕಾರಣವಾಗಿದೆ. ಒಂದು ಹುಲಿ ಸೆರೆಯಿಂದ ಮೂಲ ಸಮಸ್ಯೆ ಪರಿಹಾರವಾಗಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಜೀವ ಬಲಿ ನಡೆಯುವ ಎಲ್ಲಾ ಸಾಧ್ಯತೆಗಳಿವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದರು.
ಸಿಸಿಎಫ್ ನಿರಂಜನ್ ಮೂರ್ತಿ ಮಾತನಾಡಿ ನಾಗರಹೊಳೆ ವ್ಯಾಪ್ತಿಯಲ್ಲಿ ಒಟ್ಟು 25 ಹುಲಿಗಳನ್ನು ಸೆರೆ ಹಿಡಿದು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮೊದಲ ಹಂತವಾಗಿ ಈಗಾಗಲೇ 6 ಹುಲಿಗಳನ್ನು ಗುರುತಿಸಲಾಗಿದೆ. ಮುಂದಿನ 5 ತಿಂಗಳ ಒಳಗೆ ಎಲ್ಲಾ ಹುಲಿಗಳನ್ನು ಗುರುತಿಸಿ ಸೆರೆ ಹಿಡಿದು ಸ್ಥಳಾಂತರ ಮಾಡಲಾಗುತ್ತಿದೆ. ಈ ಹುಲಿಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗುತ್ತದೆ. ಒಂದು ತಿಂಗಳ ಒಳಗೆ ರೇಡಿಯೊ ಕಾಲರ್ ಕೂಡ ವಿತರಣೆಯಾಗಲಿದೆ ಎಂದು ಮಾಹಿತಿ ನೀಡಿದರು.
ಮಾನವನ ಮೇಲೆ ದಾಳಿ ಮಾಡಿರುವ ಹುಲಿ ಸೆರೆಗೆ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದಕ್ಕಾಗಿ ಮೈಸೂರು, ಚಾಮರಾಜನಗರ, ನಾಗರಹೊಳೆ, ಕೊಡಗು ವೃತ್ತದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಸಹಿತ 100 ಮಂದಿಯ ಒಂದು ತಂಡ ರಚಿಸಲಾಗಿದೆ. ಕಾರ್ಯಾಚರಣೆಗಾಗಿ 4 ಸಾಕಾನೆಗಳು, ಅರವಳಿಕೆ ತಜ್ಞರು, ಪಶು ವೈದ್ಯಾಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಗ್ರಾಮಸ್ಥರು ಹಾಗೂ ಸಂಘಟನೆಗಳು ಸಹಕರಿಸುವಂತೆ ನಿರಂಜನ್ ಮೂರ್ತಿ ಮನವಿ ಮಾಡಿದರು.
ಪೊನ್ನಂಪೇಟೆ ವ್ಯಾಪ್ತಿಯ ನಾಣಚ್ಚಿ ಭಾಗದಲ್ಲಿ ಹುಲಿ ದಾಳಿಯಿಂದ ಒಂದೇ ಕುಟುಂಬದ ಇಬ್ಬರು ವ್ಯಕ್ತಿಗಳು ಮೃತಪಟ್ಟಿದ್ದಾರೆ. ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, 48 ಗಂಟೆಯ ಒಳಗೆ ಹುಲಿಯನ್ನು ಸೆರೆ ಹಿಡಿಯಲಾಗುತ್ತದೆ. ಮೃತರ ಕುಟುಂಬಕ್ಕೆ ಮೊದಲ ಹಂತವಾಗಿ 5 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ. ಹುಲಿ ಸೆರೆಗೆ 100 ಮಂದಿಯ ತಂಡ ರಚಿಸಲಾಗಿದ್ದು, ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಳ್ಳಲಾಗಿದೆ.