ಮಹಿಳೆಯರು ಗ್ರಾಮಾಭಿವೃದ್ಧಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ : ವಸಂತ ಸಾಲಿಯಾನ್

ವಿರಾಜಪೇಟೆ ಫೆ.14 : ಗ್ರಾಮೀಣ ಪ್ರದೇಶದ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ 30 ಸಾವಿರ ಮಹಿಳೆಯರಿಗೆ ಸ್ವ ಉದ್ಯೋಗಕ್ಕಾಗಿ ರೂ,600 ಕೋಟಿ ಸಾಲ ನೀಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಮಹಿಳಾ ಜ್ಞಾನ ವಿಕಾಸ ಕೇಂದ್ರಗಳು ಮತ್ತು ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿರುವ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ‘ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿಯಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಮಾತನಾಡಿದರು.
ಈಗಾಗಲೇ ತಂತ್ರಜ್ಞಾನ ಬಹಳಷ್ಟು ಮುಂದುವರಿದಿದೆ. ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲಿಯೂ ಮುಂದೆ ಇದ್ದಾರೆ. ಅಗತ್ಯತೆಗಳ ಬಗ್ಗೆ ತಿಳಿದುಕೊಂಡು ಬಹಳಷ್ಟು ಯಶಸ್ವಿಯಾಗಿದ್ದಾರೆ. ಗ್ರಾಮೀಣ ಭಾಗದ ಅಸಕ್ತ ಮಹಿಳೆಯರನ್ನು ಗುರುತಿಸಿ ತರಬೇತಿ ನೀಡಲಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯಿಂದ ಸಾಲ ನೀಡುತ್ತಿಲ್ಲ ಬ್ಯಾಂಕ್ ಸಾಲ ನೀಡುತ್ತಿದೆ ಎಂದ ವಸಂತ ಸಾಲಿಯಾನ್ ಅವರು ಯೋಜನೆಯ ಸೌಲಭ್ಯಗಳನ್ನು ಸದಸ್ಯರು ಸರಿಯಾಗಿ ಬಳಕೆ ಮಾಡಿಕೊಳ್ಳುವಂತಾಗಬೇಕು ಎಂದರು.
ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಡಿ.ಆರ್. ರವಿಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸಾರ್ವಜನಿಕರು ಪೊಲೀಸರೊಂದಿಗೆ ಸಹಕಾರ ನೀಡಬೇಕು. ಗ್ರಾಮಗಳಲ್ಲಿ ಸಮಸ್ಯೆಗಳಿದ್ದಾಗ ನೇರವಾಗಿ ದೂರವಾಣಿ ಮೂಲಕ ಸಂಪರ್ಕಿಸಬಹುದು. ಪೋಷಕರು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಬೇಕು. ಯುವಕರು ದುಶ್ಚಟಗಳನ್ನು ದೂರಮಾಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬೇಕು ಎಂದರು.
ಯೋಜನೆಯ ತಾಲೂಕು ಜ್ಞಾನ ವಿಕಾಸ ಕೇಂದ್ರದ ಬಿ.ಎಸ್. ಪವಿತ್ರ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ವಿರಾಜಪೇಟೆ ಕಾವೇರಿ ಕಾಲೇಜಿನ ಉಪನ್ಯಾಸಕರಾದ ಅಂಬಿಕಾ ಉತ್ತಪ್ಪ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ‘ಸದೃಢ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಬಾನಂಗಡ ಅರುಣ್, ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಜಿಲ್ಲಾ ನಿರ್ದೇಶಕರಾದ ಲೀಲಾವತಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಮ್ಮತ್ತಿ ವಲಯದ ಮೇಲ್ವಿಚಾರಕ ಸುಜೀರ್ ಕುಲಾಲ್, ತಾಲೂಕು ಲೆಕ್ಕ ಪರಿಶೋದಕ ನವೀನ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಅಮೃತ, ಮತ್ತು ಆರ್. ಶ್ರೇಯಾ ಉಪಸ್ಥಿತರಿದ್ದರು.
ವಿರಾಜಪೇಟೆ ಮತ್ತು ಮಡಿಕೇರಿ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಬಿ. ದಿನೇಶ್ ಸ್ವಾಗತಿಸಿ, ಕೃಷಿ ಅಧಿಕಾರಿ ರಾಮ್ ಕುಮಾರ್ ನಿರೂಪಿಸಿದರೆ, ವಿರಾಜಪೇಟೆ ವಲಯ ಮೇಲ್ವಿಚಾರಕ ನಾಗರಾಜ್ ವಂದಿಸಿದರು.
ಪೊನ್ನಂಪೇಟೆ ಶ್ರೀಮಂಗಲ ವಲಯದ ಸದಸ್ಯರಾದ ಸುಜಾತ ಮನೆಯವರಿಗೆ ಗ್ಯಾಸ್ ಸ್ಪೋಟದಿಂದ ಗಾಯಗೊಂಡವರಿಗೆ ರೂ.33 ಸಾವಿರ, ಗೋಣಿಕೊಪ್ಪ-ಚೆನ್ನಂಗೋಲಿ ರುಕ್ಮಿಣಿ ಅವರಿಗೆ ಆಸ್ಪತ್ರೆ ಚಿಕಿತ್ಸಾ ವೆಚ್ಚಾ ರೂ.20 ಸಾವಿರ, ಮತ್ತು ಜಯ ಅವರಿಗೆ ಆಸ್ಪತ್ರೆ ಚಿಕಿತ್ಸಾ ವೆಚ್ಚ ರೂ.20 ಸಾವಿರ, ವಿರಾಜಪೇಟೆ ವೆಂಕಪ್ಪ ಅವರಿಗೆ ಹೃದಯ ಸಂಬಂಧಿ ಕಾಯಿಲೆಗೆ ಸಹಾಯ ರೂ.20 ಸಾವಿರ, ಸಿದ್ದಾಪುರ-ಪಾಲಿಬೆಟ್ಟ ಸಿ.ಎಸ್. ಸರಿತಾ ಆನೆ ದಾಳಿಗೆ ತುತ್ತಾದ ಕಾರಣ ರೂ.20 ಸಾವಿರ, ಸಿದ್ದಾಪುರ-ಮಾಲ್ದಾರೆ ವಿ.ಎಸ್.ಅಪ್ಪಯ್ಯ ಹೃದಯ ಸಂಬಂಧಿ ಕಾಯಿಲೆಗೆ ರೂ.15 ಸಾವಿರ ಸೇರಿ ಒಟ್ಟು 12,8000 ರೂ.ಚೆಕ್ ನೀಡಲಾಯಿತು.
ಈ ಸಂದರ್ಭ ಜ್ಞಾನ ವಿಕಾಸ ಕೇಂದ್ರ, ಪ್ರಗತಿಬಂಧು ಸ್ವ ಸಹಾಯ ಸಂಘಗಳ ಸದಸ್ಯರು ಹಾಜರಿದ್ದರು.
