ನೆಲಜಿ : ರೈತರ ಬೆಳವಣಿಗೆಯಲ್ಲಿ ದವಸ ಭಂಡಾರಗಳ ಪಾತ್ರ ಮಹತ್ವ : ಶಾಸಕ ಕೆ.ಜಿ.ಬೋಪಯ್ಯ

ನಾಪೋಕ್ಲು ಜ.14 : ರೈತರ ಬೆಳವಣಿಗೆಯಲ್ಲಿ ದವಸ ಭಡಾರಗಳ ಪಾತ್ರ ಮಹತ್ವವಾಗಿದ್ದು, ಅವುಗಳ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಸಹಕಾರಿ ಸಂಘಗಳನ್ನು ಬೆಳೆಸುವಲ್ಲಿ ಅನೇಕ ಹಿರಿಯ ಚೇತನಗಳು ತಮ್ಮದೇ ಆದ ಪಾತ್ರವನ್ನು ವಹಿಸಿದ್ದಾರೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.
ನಂ. 94ನೇ ನೆಲಜಿ ಸಹಕಾರ ದವಸ ಭಂಡಾರ ನಿಯಮಿತದ ನವೀಕೃತಗೊಂಡ ಕಟ್ಟಡ ಸಂಕೀರ್ಣಗಳ ಹಾಗೂ ಶತಮಾನೋತ್ಸವ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಬೋಪಯ್ಯ, ಜಿಲ್ಲೆಯಲ್ಲಿ 53 ದವಸ ಭಂಡಾರಗಳು ಅಸ್ತಿತ್ವದಲ್ಲಿದೆ. ಸಹಕಾರಿ ಸಂಸ್ಥೆಗಳು ಸ್ವಾಯತ್ತಿಕ ಸಂಸ್ಥೆಗಳಾಗಬೇಕು. ಯಾವುದೇ ರಾಜಕೀಯ ಹಸ್ತಕ್ಷೇಪ ಇರಬಾರದು ಎಂದರು.
ಸುಲಭದಲ್ಲಿ ರೈತರಿಗೆ ಸಹಕಾರಿ ಸಂಘಗಳ ಮೂಲಕ ಸಾಲ ಸೌಲಭ್ಯ ಸಿಗುತ್ತಿದ್ದು, ರೈತರ ಬೆಳವಣಿಗೆಯಲ್ಲಿ ಸಹಕಾರ ಸಂಘಗಳ ಪಾತ್ರ ಮಹತ್ತರವಾದುದಾಗಿದೆ. ಇಂತಹ ಸಹಕಾರಿ ಸಂಘಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದು ಎಂದರು.
ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಹೊರ ಸಭಾಂಗಣ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿ, ರೈತರ ಅಭಿವೃದ್ಧಿ ಆಗಬೇಕಾದರೆ ಸಹಕಾರಿ ಸಂಘಗಳ ಅಗತ್ಯವಿದೆ. ಗ್ರಾಮೀಣ ರೈತರ ಆರ್ಥಿಕ ಅಭಿವೃದ್ಧಿಯಿಂದ ಸ್ಥಳೀಯ ಬ್ಯಾಂಕುಗಳ ಅಭಿವೃದ್ಧಿ ಆಗುತ್ತದೆ ಎಂದರು.
ವೇದಿಕೆಯನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೆರ ಬಿ.ಗಣಪತಿ ಮಾತನಾಡಿ, ನೆಲಜಿ ಗ್ರಾಮದ ಸಹಕಾರಿಗಳ ಸಹಕಾರದಿಂದ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದೆ. ಇದು ಇತರ ಸಹಕಾರಿ ಸಂಸ್ಥೆಗಳಿಗೆ ಒಂದು ಮಾದರಿಯಾಗಬೇಕು. ಸಹಕಾರ ಸಂಘಗಳು ಭದ್ರವಾಗಿದ್ದರೆ ಮಾತ್ರ ಜಿಲ್ಲೆಯ ಡಿಸಿಸಿ ಬ್ಯಾಂಕ್ ಸುಭದ್ರವಾಗಿರುತ್ತದೆ ಎಂದರು.
ಮಾಜಿ ಅಡಿಷನಲ್ ಅಡ್ವಕೇಟ್ ಜನರಲ್ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಸಭಾಂಗಣವನ್ನು ಉದ್ಘಾಟನೆಗೊಳಿಸಿ ಮಾತನಾಡಿ ಸಹಕಾರ ಸಂಘಗಳನ್ನು ಸ್ಥಾಪಿಸುವುದು ಸಹಕಾರಿಗಳ ಮೂಲಭೂತ ಹಕ್ಕಾಗಿದ್ದು, ಇದರಲ್ಲಿ ಸರ್ಕಾರಿ ಅಧಿಕಾರಿಗಳು ಹಸ್ತಕ್ಷೇಪ ಮಾಡುವಂತಿಲ್ಲ. 27 ಲಕ್ಷ ರೂಪಾಯಿ ವೆಚ್ಚದಲ್ಲಿ ನೆಲೆಜಿಯ ಸಹಕಾರಿ ಸಂಘವನ್ನು ಪುನಶ್ಚೇತನ ಮಾಡಿರುವುದು ಹೆಮ್ಮೆಯ ವಿಷಯ. ಇದು ಸಹಕಾರಿ ವ್ಯವಸ್ಥೆಯ ಯಶಸ್ಸಿಗೆ ಒಂದು ಉದಾಹರಣೆಯಾಗಿದೆ ಎಂದರು.
ಸಹಕಾರಿ ವ್ಯವಸ್ಥೆ ಜಿಲ್ಲೆಯಲ್ಲಿ ಉತ್ತಮವಾಗಿ ನಡೆಯುತ್ತಿದೆ. ಶೇ. 85ರಷ್ಟು ಸಹಕಾರಿ ಸಂಸ್ಥೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ನೆಲಜಿ ಸಹಕಾರಿ ಕ್ಷೇತ್ರವು ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.
ಕೊಡಗು ಜಿಲ್ಲಾ ಸಹಕಾರ ಒಕ್ಕೂಟಗಳ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಡಿಸಿಸಿ ಬ್ಯಾಂಕು ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿವೃತ್ತ ಡಿ.ಎಫ್ .ಒ.ಮುಕ್ಕಾಟಿರ ಎಂ.ಜಯ,ಕ್ರೀಡಾ ಸಮಿತಿ ಅಧ್ಯಕ್ಷ ಅಪ್ಪುಮಣಿಯಂಡ ಸನ್ನು ಸೋಮಣ್ಣ, ನಬಾರ್ಡ್ ನಿವೃತ್ತ ಡಿ.ಡಿ.ಎಂ ಮುಂಡಂಡ ಸಿ ನಾಣಯ್ಯ, ನೆಲಜಿ ನಾಡು ಮರಣ ಫಂಡ್ ಅಧ್ಯಕ್ಷ ಮಣವಟ್ಟಿರ ಎಂ.ಚೆಂಗಪ್ಪ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಈ ಸಂದರ್ಭ ವೇದಿಕೆಯಲ್ಲಿ ದಾನಿ, ಉದ್ಯಮಿ ಮಂಡಿರ ಎ. ಜಯದೇವಯ್ಯ, ದಾನಿಗಳಾದ ಬಾಳಿಯಡ ಸಿ.ಪ್ರಕಾಶ್ ನಾಣಯ್ಯ ಹಾಗೂ ಅಚ್ಚಾಂಡಿರ ಬಿ. ಅರುಣ್ ಭೀಮಯ್ಯ ಉಪಸ್ಥಿತರಿದ್ದರು.
ನೆಲಜಿ ಸಹಕಾರ ದವಸ ಭಂಡಾರದ ಅಧ್ಯಕ್ಷ ಬಾಳಿಯಡ ಸಿ. ಕುಂಜಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ದವಸ ಬಂಡಾರದ ಆಡಳಿತ ಮಂಡಳಿ ಹಾಗೂ ಶತಮಾನೋತ್ಸವ ಸಮಾರಂಭದ ಸಮಿತಿಯ ಪದಾಧಿಕಾರಿಗಳು ಮತ್ತು ಸಮಿತಿ ಸರ್ವ ಸದಸ್ಯರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕ ಉಪಸ್ಥಿತರಿದ್ದರು.
ಈ ಸಂದರ್ಭ ಸಹಕಾರಿ ಕ್ಷೇತ್ರದ ಅಧ್ಯಕ್ಷರಾಗಿ ದುಡಿದ ಮಹನೀಯರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಮಾಳೆಯಂಡ ಎ. ಅಯ್ಯಪ್ಪ, ಕೋಟೇರ ಪಿ.ಪಳಂಗಪ್ಪ, ನಾಪನೆರವಂಡ ಸಿ.ಪೊನ್ನಪ್ಪ, ಕೋಟೆರ ಈ. ಭೀಮಯ್ಯ ಕೈಬುಲಿರ ಕೆ.ಚಿಣ್ಣಪ್ಪ, ಕೈಬುಲಿರ ಕೆ.ಗಣಪತಿ, ಬಾಳಿಯಡ ಜಿ.ಉತ್ತಪ್ಪ, ನಾಪನೆರವಂಡ ಸಿ.ಸೋಮಯ್ಯ. ಮುಂಡಂಡ ಕೆ.ಪೊನ್ನಣ್ಣ, ಚೆಟ್ಟಿನೆರವನ ಎಸ್.ಮಾದಪ್ಪ ಮಾಜಿ ಕಾರ್ಯದರ್ಶಿ ಬದ್ದಂಜೆಟ್ಟೀರ ಬಿ.ನಾಣಯ್ಯ ಅವರನ್ನು ಹಾಗೂ ಸ್ಥಳದಾನಿಗಳಾದ ಬಾಳೆಯಡ ಕುಟುಂಬಸ್ಥರ ಪರವಾಗಿ ಪಟ್ಟೇದಾರ, ನಿವೃತ್ತ ಅರ್. ಎಫ್. ಒ .ಕೆ.ತಮ್ಮಯ್ಯ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಮಂಡಿರ ಕೆ.ನಂಜಪ್ಪ, ದವಸ ಭಂಡಾರದ ಅಧ್ಯಕ್ಷ ಬಾಳಿಯಡ ಸಿ ಕುಂಜಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಅಲ್ಲಾರಂಡ ಪ್ರೀತಿ ಕುಮಾರಿ ಪ್ರಾರ್ಥಿಸಿದರು. ಬಾಳಿಯಡ ಕುಂಜಪ್ಪ ಸ್ವಾಗತಿಸಿದರು. ಮುಕ್ಕಾಟಿರ ಎಂ.ವಿನಯ್ ಕಾರ್ಯಕ್ರಮ ನಿರೂಪಿಸಿ, ಅತಿಥಿಗಳ ಪರಿಚಯ ಮಾಡಿದರು. ಮುಂಡಂಡ ನಂಜುಂಡ ದವಸ ಭಂಡಾರದ ಕಿರು ಪರಿಚಯವನ್ನು ಸಭೆಗೆ ಮಂಡಿಸಿ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ಮುಂಡಂಡ ಕೆ.ನಂಜಪ್ಪ ಪ್ರಾಥಮಿಕ ನುಡಿ ಹಾಡಿದರು. ಬದಂಜೆಟ್ಟೀರ ಎ.ತಿಮ್ಮಯ್ಯ ವಂದಿಸಿದರು. ಬಳಿಕ ಸಂಜೆ ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವರದಿ – ದುಗ್ಗಳ ಸದಾನಂದ.
