Advertisement
4:26 AM Friday 8-December 2023

ಚುನಾವಣೆ ಬಹಿಷ್ಕಾರ : ಹೆಬ್ಬೆಟ್ಟಗೇರಿ-ದೇವಸ್ತೂರು ಗ್ರಾಮಸ್ಥರ ಎಚ್ಚರಿಕೆ

14/02/2023

ಮಡಿಕೇರಿ ಫೆ.14 : ಹೆಬ್ಬೆಟ್ಟಗೇರಿ-ದೇವಸ್ತೂರು ಗ್ರಾಮದ ರಸ್ತೆ ಅಬ್ಬಿಪಾಲ್ಸ್ ಜಂಕ್ಷನ್ ನಿಂದ ದೇವಸ್ತೂರು ಗ್ರಾಮದವರೆಗೆ ಸಂಪೂರ್ಣ ಹದಗೆಟ್ಟಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಆಗ್ರಹಿಸಿ ಫೆ.17 ರಂದು ರಸ್ತೆ ತಡೆ ಪ್ರತಿಭಟನೆ ನಡೆಸುವುದಾಗಿ ಹೆಬ್ಬೆಟ್ಟಗೇರಿ ಗ್ರಾಮಸ್ಥರು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥ ಪಿ.ಸಿ.ರಮೇಶ್, ಹೆಬ್ಬೆಟ್ಟಗೇರಿ-ದೇವಸ್ತೂರು ಗ್ರಾಮದ ರಸ್ತೆ ಅಬ್ಬಿಪಾಲ್ಸ್ ಜಂಕ್ಷನ್‍ನಿಂದ ದೇವಸ್ತೂರು ಗ್ರಾಮದವರೆಗೆ ಸುಮಾರು 8 ಕಿ.ಮೀ ನಷ್ಟು ದೂರ ಸಂಪೂರ್ಣ ಹದಗೆಟ್ಟಿದ್ದು, ಪಾದಾಚಾರಿಗಳು ಹಾಗೂ ವಾಹನ ಸವಾರರಿಗೆ ಓಡಾಡಲು ಅನಾನುಕೂಲವಾಗಿದೆ ಎಂದರು.
ಗುಂಡಿಮಯ ರಸ್ತೆಗಳಿಂದಾಗಿ ಗ್ರಾಮಸ್ಥರು ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ಗ್ರಾಮಕ್ಕೆ ಬರುತ್ತಿದ್ದ ಶಾಲಾ ವಾಹನ ಬಾರದೆ ಇರುವುದರಿಂದ ವಿದ್ಯಾರ್ಥಿಗಳು ಆಟೋದಲ್ಲೇ ತೆರಳಬೇಕಾಗಿದೆ. ಆಟೋ ಚಾಲಕರು ಕೂಡ ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ ದುಬಾರಿ ಹಣ ಕೇಳುತ್ತಿದ್ದಾರೆ, ಇದರಿಂದಾಗಿ ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿತರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಂಜಿನಿಯರ್‍ಗಳಿಗೆ ರಸ್ತೆ ದುರಸ್ಥಿ ಪಡಿಸುವಂತೆ ಆಗ್ರಹಿಸಿ ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಸ್ಪಂದನೆ ದೊರೆತ್ತಿಲ್ಲ. ಆದ್ದರಿಂದ ದೇವಸ್ತೂರು ಮತ್ತು ಹೆಬ್ಬೆಟ್ಟಗೇರಿಯ ಗ್ರಾಮಸ್ಥರೆಲ್ಲರು ರಾಜಕೀಯ ರಹಿತವಾಗಿ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಹೇಳಿದರು.
ಎರಡು ಗ್ರಾಮಗಳಲ್ಲಿ ಸುಮಾರು 1500 ಮತದಾರರಿದ್ದು, ರಸ್ತೆ ದುರಸ್ತಿ ಕಾರ್ಯ ನಡೆಯದಿದ್ದಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ರಮೇಶ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ತೂರು ಗ್ರಾಮಸ್ಥ ಕುಕ್ಕೇರ ಲಕ್ಷ್ಮಣ್, ಹೆಬ್ಬೆಟ್ಟಗೇರಿ ಗ್ರಾಮಸ್ಥರಾದ ಬಿ.ವಿ.ಸತೀಶ್ ಪೂಜಾರಿ ಹಾಗೂ ಸ್ಟ್ಯಾನ್ಲಿ  ಉಪಸ್ಥಿತರಿದ್ದರು.